ಮಗುವಿನ ಸರ್ವಾಂಗೀಣ ಬೆಳವಣಿಗೆ ಎಂದರೆ ಶಾರೀರಿಕ, ಮಾನಸಿಕ, ಬೌದ್ಧಿಕ ಹಾಗು ಆತ್ಮಸ್ತೈರ್ಯದ ವಿಕಾಸವಾಗಿದೆ. ಅದಕ್ಕೆ ಅಂಗನವಾಡಿ ಕೇಂದ್ರವೇ ಅಡಿಪಾಯವಾಗಬೇಕೆಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಐನಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯ, ಶಿಶುಗಳ ಆರೋಗ್ಯ ಮತ್ತು ಆರೈಕೆ ಮತ್ತು ಹದಿಹರೆಯದ ಮಕ್ಕಳ ಆರೋಗ್ಯಕ್ಕೆ ಪೂರಕವಾದಂತಹ ಯೋಜನೆಯನ್ನು ಸರ್ಕಾರ ರೂಪಿಸಿರುವುದನ್ನು ಅಂಗನವಾಡಿ ಕಾರ್ಯಕರ್ತೆಯರು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು ಎಂದು ಹೇಳಿದರು.
ಇಂದು ಮಕ್ಕಳಿಗೆ ಶಾಲೆಗಳಲ್ಲಿ ಪ್ರಾಥಾಮಿಕ ಹಂತದಿಂದಲೂ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಜವಹರಲಾಲ್ ನೆಹರು ಅವರಿಗೆ ಮಕ್ಕಳೆಂದರೆ ಬಹಳ ಇಷ್ಟ. ಅವರು ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಅಂಟಿಸಿ ಸಂತೋಷ ಪಡುತ್ತಿದ್ದರು. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ದೇಶದಾದ್ಯಂತ ಈ ದಿನದಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಕೆ.ಲಕ್ಷ್ಮೀದೇವಮ್ಮ ಇಲಾಖೆಯಿಂದ ಸಿಗುವ ಯೋಜನೆಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಂದ ಛದ್ಮ ವೇಷ ಸ್ಪರ್ಧೆ, ನೃತ್ಯ, ಭಾಷಣ ಸ್ಪರ್ಧೆ ನಡೆಯಿತು. ವಿವಿಧ ವೇಷಭೂಷಣಗಳನ್ನು ಧರಿಸಿದ್ದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಐನಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳು ಮಹಿಳಾ ಶೋಷಣೆ ಮತ್ತು ಅದರ ವಿರುದ್ಧ ಹೋರಾಟದ ಕುರಿತು ನಾಟಕವನ್ನು ಪ್ರದರ್ಶಿಸಿದರು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಐನಾ ಟ್ರಸ್ಟ್ ನಿರ್ದೇಶಕಿ ಮೇರಿ ಚಲ್ಲದೊರೈ, ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಎ.ಜಿ.ಸುಧಾಕರ್, ಶಿಶು ಅಭಿವೃದ್ಧಿ ಇಲಾಖೆಯ ಆನಂದ್, ಸಂದೀಪ್, ಅಂಜದ್, ರಾಧಮ್ಮ, ಶಾಂತಮ್ಮ, ಕಿರಿಯ ಮಹಿಳಾ ಸಹಾಯಕಿಯರು, ಪೋಷಕರು ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -