ಮಣ್ಣು ನಿರ್ಜೀವ ವಸ್ತುವಲ್ಲ ಬದಲಿಗೆ ಅನೇಕ ಸೂಕ್ಷ್ಮಾಣು ಜೀವಿಗಳನ್ನು ಹೊಂದಿರುವ ಅಮೂಲ್ಯ ಹಾಗೂ ಸಜೀವ ವಸ್ತು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ಬಳಿ ತೋಟವೊಂದರಲ್ಲಿ ಮಂಗಳವಾರ ಮಣ್ಣು ಆರೋಗ್ಯ ಅಭಿಯಾನ ಯೋಜನೆಯಡಿ ಏರ್ಪಡಿಸಲಾಗಿದ್ದ ಮಣ್ಣು ಮಾದರಿ ಸಂಗ್ರಹಣಾ ಪ್ರಾತ್ಯಕ್ಷಿಕೆ ಹಾಗು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಣ್ಣು ನೈಸರ್ಗಿಕ ಪರಿಸರದ ಒಂದು ಪ್ರಮುಖ ಅಂಶವಾಗಿದ್ದು ಮಣ್ಣಿನ ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಬೆಳೆಗಳು ಚೆನ್ನಾಗಿ ಆಗುತ್ತವೆ. ಹಾಗಾಗಿ ಪ್ರತಿಯೊಬ್ಬ ರೈತರೂ ಕನಿಷ್ಠ ಮೂರು ವರ್ಷಕ್ಕೆ ಒಮ್ಮೆಯದಾರೂ ಮಣ್ಣಿನ ಪರೀಕ್ಷೆ ಮಾಡಿಸಬೇಕು ಎಂದರು.
ಮಣ್ಣಿನಲ್ಲಿ ಫಲವತ್ತತೆ ಕಾಪಾಡಿಕೊಂಡಲ್ಲಿ ಬೆಳೆ ಚೆನ್ನಾಗಿ ಆಗುವುದರೊಂದಿಗೆ ಇಳುವರಿ ಹೆಚ್ಚಾಗುತ್ತದೆ. ಈ ಬಗ್ಗೆ ಇಲಾಖೆಯಿಂದ ರೈತರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದರೂ ಶೇ. ೧೦ ರಷ್ಟು ರೈತರು ಮಾತ್ರ ಮಣ್ಣಿನ ಪರೀಕ್ಷೆ ಮಾಡಸುವುದರೊಂದಿಗೆ ಮಣ್ಣಿನ ಆರೋಗ್ಯ ಕಾಪಾಡಲು ಮುಂದಾಗಿದ್ದಾರೆ. ಇನ್ನುಳಿದ ಶೇ. ೯೦ ರಷ್ಟು ಮಂದಿ ರೈತರು ಮಣ್ಣಿನ ಪರೀಕ್ಷೆ ಮಾಡಿಸದೇ ಕೆಲವೇ ಕೆಲ ಗೊಬ್ಬರಗಳನ್ನು ಬಳಸುವುದರಿಂದ ರೈತರಿಗೆ ಖರ್ಚು ಜಾಸ್ತಿಯಾಗುತ್ತದೆ ಹಾಗು ರೈತರು ನಿರೀಕ್ಷಿಸಿದಷ್ಟು ಉತ್ತಮ ಬೆಳೆಯೂ ಆಗುವುದಿಲ್ಲ.
ಇದನ್ನು ಮನಗಂಡ ಸರ್ಕಾರ ಇದೀಗ ಮಣ್ಣು ಆರೋಗ್ಯ ಅಭಿಯಾನದ ಹೆಸರಿನಲ್ಲಿ ರೈತರ ಜಮೀನಿನಿಂದ ಮಣ್ಣಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ ಪ್ರತಿಯೊಬ್ಬ ರೈತರಿಗೂ ಮಣ್ಣಿನ ಆರೋಗ್ಯದ ಕಾರ್ಡ್ ನ್ನು ತಲುಪಿಸುವ ಕೆಲಸವನ್ನು ಆರಂಬಿಸಿದೆ. ರಾಜ್ಯದಲ್ಲಿ ಈಗಾಗಲೇ ಸುಮಾರು ೬ ಲಕ್ಷ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ. ಅಭಿಯಾನ ಎರಡು ವರ್ಷಗಳ ಕಾಲ ನಡೆಯುತ್ತಿದ್ದು ಪ್ರತಿಯೊಬ್ಬರಿಗೂ ಮಣ್ಣಿನ ಆರೋಗ್ಯದ ಕಾರ್ಡ್ ತಲುಪಿಸಲು ಸುಮಾರು ೩೦೦ ರಿಂದ ೪೦೦ ರೂಗಳ ಖರ್ಚು ಬರುತ್ತದೆ ಇದನ್ನೆಲ್ಲಾ ಸರ್ಕಾರವೇ ಭರಿಸುತ್ತದೆ. ಪ್ರತಿಯೊಬ್ಬ ರೈತರು ಸರ್ಕಾರ ನೀಡುವ ಮಣ್ಣಿನ ಆರೋಗ್ಯ ಕಾರ್ಡ್ ಬಳಸಿಕೊಂಡು ತಮ್ಮ ಭೂಮಿಯಲ್ಲಿ ಯಾವ ಅಂಶ ಜಾಸಿಯಿದೆ, ಯಾವುದರ ಅಗತ್ಯವಿದೆ ಎಂಬುದನ್ನು ತಿಳಿದುಕೊಂಡು ಜಮೀನಿಗೆ ಅಗತ್ಯವಿರುವ ಲಘು ಪೋಷಕಾಂಶಗಳನ್ನು ಉಪಯೋಗಿಸಿಕೊಂಡು ಉತ್ತಮ ಇಳುವರಿ ಪಡೆಯಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಸಿಇಓ ಬಿ.ಬಿ.ಕಾವೇರಿ, ತಹಶೀಲ್ದಾರ್ ಮನೋರಮಾ, ಶಾಸಕ ಎಂ.ರಾಜಣ್ಣ, ಮಾಜಿ ಸಚಿವ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಉಪಾಧ್ಯಕ್ಷೆ ಪಿ.ನಿರ್ಮಲಾಮುನಿರಾಜು, ಸದಸ್ಯ ಬಂಕ್ಮುನಿಯಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಮೀನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -