ಸಿನಿಮಾ ಆಕರ್ಷಣೆಯಲ್ಲಿ ಜಿಲ್ಲೆಯ ಜಾನಪದವನ್ನು ಮರೆಯಬಾರದು. ನಿಜವಾದ ಪ್ರತಿಭೆಗೆ ಸ್ಥಾನ ನೀಡುವುದು ಜಾನಪದ ಮತ್ತು ರಂಗಕಲೆಯಲ್ಲಿ ಮಾತ್ರ.ಜಿಲ್ಲೆಯ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಅತ್ಯಗತ್ಯ ಎಂದು ಮಳ್ಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಧ ಶಿವಣ್ಣ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಈಚೆಗೆ ಮಳ್ಳೂರು ಡಾ.ಬಿ.ಆರ್.ಅಂಬೇಡ್ಕರ್ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 2016–17ನೇ ಸಾಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಕಲೆ, ಸಂಗೀತ, ನೃತ್ಯ, ನಾಟಕ, ರಂಗಕಲೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳು. ಜೀವನವಿಡೀ ಕಲೆಗಾಗಿ ಮುಡಿಪಿಟ್ಟ ಅಪರೂಪದ ಎಲೆಮರೆಯಂಥಹ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು ಎಂದು ಹೇಳಿದರು.
ನಾಟಕ ನಿರ್ದೇಶಕ ಎಂ.ಶಿವಣ್ಣ ನಿರ್ದೇಶನದ ಶ್ರೀಕೃಷ್ಣ ರಾಯಭಾರ, ಕುರುಕ್ಷೇತ್ರ ಹಾಗೂ ಶ್ರೀಕೃಷ್ಣ ಸಂಧಾನ ಮತ್ತು ದಾನವೀರಶೂರ ಕರ್ಣ ಎಂಬ ಪೌರಾಣಿಕ ನಾಟಕಗಳು ನಡೆದವು. ಎನ್.ಮುನಿರಾಜು ಮತ್ತು ತಂಡದಿಂದ ಜಾನಪದ ಗಾಯನ, ಬೆಟ್ಟಕೋಟೆ ಶಿವಾನಂದ ಮತ್ತು ತಂಡದಿಂದ ಸಾಮಾಜಿಕ ನಾಟಕ, ರೋಹಿಣಿ ಕುಮಾರ್ ಮತ್ತು ತಂಡದಿಂದ ತತ್ವಪದಗಾಯನ, ಕೊತ್ತನೂರು ಗಂಗಾಧರ್ ಮತ್ತು ತಂಡದಿಂದ ವೀರಗಾಸೆ, ನಾಮದೇವ ಮತ್ತು ತಂಡದಿಂದ ಹರಿದಾಸರ ಪದಗಳ ಕಾರ್ಯಕ್ರಮ ನಡೆಯಿತು. ಕಲಾವಿದರನ್ನು ಡಾ.ಬಿ.ಆರ್.ಅಂಬೇಡ್ಕರ್ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ, ಗ್ರಾಮ ಪಂಚಾಯ್ತಿ ಸದಸ್ಯ ಸತೀಶ್, ಶ್ರೀನಿವಾಸರೆಡ್ಡಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







