ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರಾದ ಮಾಜಿ ಸಚಿವ ವಿ.ಮುನಿಯಪ್ಪ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಪುನಃ ಸಂಧಾನವಾಗಿದ್ದು ರಾಜಕೀಯ ವಲಯದಲ್ಲಿ ಹೊಸ ಬೆಳವಣಿಗೆಯಾಗಿದೆ.
ಕಳೆದ ವಿಧಾನಸಭೆಯ ಚುನಾವಣೆಯ ನಂತರ ಇಬ್ಬರು ಮುಖಂಡರ ನಡುವೆ ಪ್ರಾರಂಭವಾದ ಅಸಮಾಧಾನ ಮತ್ತು ಭಿನ್ನಮತ ಲೋಕಸಭಾ ಚುನಾವಣೆಯ ಬಳಿಕ ಪರಸ್ಪರ ಅಂತರ ಕಾಯ್ದುಕೊಳ್ಳುವಂತಾಗಿತ್ತು. ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳಾಗಿ ಕಾರ್ಯಕರ್ತರಲ್ಲಿ ಒಡಕುಂಟಾಗಿತ್ತು.
ಕಳೆದ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೇಟ್ ಪಡೆಯಲು ಮಾಜಿ ಸಚಿವ ವಿ.ಮುನಿಯಪ್ಪ ಪ್ರಯತ್ನ ನಡೆಸಿದರೆ ಮತ್ತೊಂದಡೆ ಸಂಸದ ಕೆ.ಎಚ್.ಮುನಿಯಪ್ಪ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿ ಅನಿಲ್ಕುಮಾರ್ಗೆ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ತಮ್ಮ ಶಿಷ್ಯನನ್ನು ಗೆಲ್ಲಿಸಲು ಮಾತ್ರ ವಿಫಲರಾದರು. ಇಬ್ಬರು ನಾಯಕರ ಮಧ್ಯೆಯಿರುವ ಭಿನ್ನಮತ ಮತ್ತು ಗುಂಪುಗಾರಿಕೆಯ ಲಾಭವನ್ನು ಪಡೆದುಕೊಂಡ ವಿರೋಧ ಪಕ್ಷದ ಜೆ.ಡಿ.ಎಸ್ ಅಭ್ಯರ್ಥಿ ಗೆಲುವು ಸಾಧಿಸಿದರು.
ಸಂಧಾನ: ಅವಿಭಜಿತ ಕೋಲಾರ ಜಿಲ್ಲೆ ಕಾಂಗ್ರೆಸ್ ಪಕ್ಷದ ಪಾಲಿಗೆ ಭದ್ರಕೋಟೆಯಾಗಿದ್ದು, ರಾಜಕೀಯ ಮುಖಂಡರ ಗುಂಪುಗಾರಿಕೆ ಮತ್ತು ಭಿನ್ನಮತದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ರಾಜಿ ಸಂಧಾನಗಳು ನಡೆದಿವೆ. ಅವಳಿ ಜಿಲ್ಲೆಯ ಪ್ರಭಾವಿ ನಾಯಕರನ್ನು ಒಗ್ಗೂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಮಲ್ಲಿಕಾರ್ಜುನ ಖರ್ಗೆ, ಸಚಿವ ಕೃಷ್ಣ ಬೈರೇಗೌಡ ಮತ್ತು ಶಾಸಕ ಶಿವಶಂಕರರೆಡ್ಡಿ ಸಂಧಾನಕಾರರಾಗಿ ಉಭಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ.
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಇಬ್ಬರೂ ಒಂದಾಗಿ ಹಾಗೂ ಜಂಟಿಯಾಗಿ ಪ್ರಚಾರ ನಡೆಸಬೇಕೆಂದು ಸಂಸದರು ಹಾಗೂ ಮಾಜಿ ಸಚಿವರನ್ನು ಒಪ್ಪಿಸಿದ್ದಾರೆ. ಈ ಹಿಂದೆ ನಡೆದಿರುವ ಬೆಳವಣಿಗೆಗಳನ್ನು ಮರೆತು ಪಕ್ಷ ಹಾಗೂ ಕಾರ್ಯಕರ್ತರ ಹಿತರಕ್ಷಣೆಗಾಗಿ ಸಂಘಟಿತರಾಗಬೇಕೆಂದು ಹಿರಿಯ ಮುಖಂಡರ ಸಂಧಾನಕ್ಕೆ ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳಾದರೆ ಅದರ ಲಾಭ ಗಿಟ್ಟಿಸಿಕೊಳ್ಳಲು ಕಾದಿದ್ದ ಜೆ.ಡಿ.ಎಸ್ ಪಕ್ಷದವರಿಗೆ ನಿರಾಸೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಾದ ಬೆಳವಣಿಗೆಯಿಂದಾಗಿ ಜೆ.ಡಿ.ಎಸ್ ಪಕ್ಷದವರು ಚುನಾವಣಾ ತಂತ್ರಗಾರಿಕೆಯನ್ನು ಬದಲಾಯಿಸಿದ್ದಾರೆ.
ಆದರೂ ಬಿಫಾರಂ ಹಂಚಿಕೆಯ ನಂತರ ಎರಡೂ ಪಕ್ಷಗಳಲ್ಲಿ ಪ್ರಮುಖರಿಗೆ ಟಿಕೇಟ್ ಸಿಗದಿದ್ದಲ್ಲಿ ಭಿನ್ನಮತವು ಸ್ಫೋಟಿಸುವ ಅವಕಾಶಗಳಿವೆ.
- Advertisement -
- Advertisement -
- Advertisement -







