ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬರುವಂತಹ ಯಾವುದೇ ಉದ್ದೇಶವನ್ನು ಇಟ್ಟುಕೊಂಡು ಲಕ್ಷ್ಮಣ ಚಿತ್ರ ಹಾಡುಗಳ ಬಿಡುಗಡೆಯ ಕಾರ್ಯಕ್ರಮವನ್ನು ಮಾಡಿಲ್ಲವೆಂದು ನಿರ್ದೇಶಕ ಆರ್.ಚಂದ್ರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದು, ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ, ರಾಜ್ಯದ ಜನತೆಯ ಸಹಕಾರದಿಂದ ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಿದೆ. ಗಾಂಧಿನಗರದಲ್ಲಿ ಶಿಡ್ಲಘಟ್ಟ ಎಂದಾಕ್ಷಣ ಉತ್ತರ ಕರ್ನಾಟಕದ ಭಾಗವೆಂಬ, ಯಾವುದೋ ಕುಗ್ರಾಮವೆಂಬ ಭಾವನೆಯಿತ್ತು, ಈ ಭಾವನೆಯನ್ನು ತೊಲಗಿಸಿ, ಶಿಡ್ಲಘಟ್ಟದ ವಾತಾವರಣವನ್ನು ಕನ್ನಡ ಚಲನಚಿತ್ರ ರಂಗಕ್ಕೆ ಪರಿಚಯಿಸಬೇಕು, ಶಿಡ್ಲಘಟ್ಟವನ್ನು ರಾಜ್ಯದ ಜನತೆಗೆ ತಿಳಿಸಬೇಕೆನ್ನುವ ಹಂಬಲ, ಹಾಗೂ ಕನ್ನಡ ಚಿತ್ರರಂಗದ ಕೆಲವು ಮಂದಿ ಸಾಧಕರನ್ನು ಇಲ್ಲಿನ ಜನತೆಗೆ ಪರಿಚಯಿಸುವಂತಹ ಅಭಿಲಾಶೆಯಿಂದ ಲಕ್ಷಣ ಚಿತ್ರ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮ ರಾಜಕೀಯಕ್ಕಾಗಿ ಮಾಡಿದ್ದಲ್ಲ, ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಗಡಿಭಾಗದಲ್ಲಿಯೂ ಕನ್ನಡ ಭಾಷೆಯ ಬಗ್ಗೆ ಇರುವಂತಹ ಅಪಾರವಾದ ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದಂತಹ ಪ್ರತಿಯೊಬ್ಬ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ, ಎಂದ ಅವರು, ಕಾರ್ಯಕ್ರಮಕ್ಕೆ ಬಂದಂತಹ ಅನೇಕ ಮಂದಿ ಗಣ್ಯರನ್ನು ನೇರವಾಗಿ ಸಂಪರ್ಕ ಮಾಡಿ, ಅವರನ್ನು ಉಪಚರಿಸಲು ಸಾಧ್ಯವಾಗಿಲ್ಲ, ಕಾರ್ಯಕ್ರಮದ ಆಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಸ್ವಯಂ ಸೇವಕರುಗಳು, ಅಥವಾ ಭದ್ರತಾ ಸಿಬ್ಬಂದಿಯಿಂದ ಯಾರಿಗಾದರೂ ಮುಜುಗರ ಉಂಟಾಗಿದ್ದರೆ, ಕ್ಷಮೆಯಿರಲಿ ಎಂದರು.
ಜೂನ್ ತಿಂಗಳ ಒಳಗೆ ಲಕ್ಷ್ಮಣ ಚಲನಚಿತ್ರವನ್ನು ಬಿಡುಗಡೆಗೊಳಿಸಲಾಗುತ್ತದೆ. ರಾಜ್ಯದಲ್ಲಿ ಚಲನಚಿತ್ರ ಮಂದಿರಗಳನ್ನು ಗುರ್ತಿಸಲಾಗುತ್ತಿದೆ, ಶಿಡ್ಲಘಟ್ಟದಲ್ಲಿಯೂ ಕೂಡಾ ಸಿನಿಮಾ ನೋಡುವಂತಹ ಅವಕಾಶವನ್ನು ಇಲ್ಲಿನ ಜನರಿಗೆ ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಶತದಿನೋತ್ಸವವನ್ನು ಶಿಡ್ಲಘಟ್ಟದಲ್ಲೆ ಮಾಡಲು ಚಿಂತನೆ ನಡೆಸಲಾಗಿದೆ ಎಂದರು. ಚಲನಚಿತ್ರ ನಿರ್ಮಾಪಕ ಆರ್.ವಿಜಯಕುಮಾರ್, ಚಂದ್ರು, ಮಧು, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -