21.1 C
Sidlaghatta
Monday, December 1, 2025

‘ರಾಜ ಋಷಿ’ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮದಿನಾಚರಣೆ

- Advertisement -
- Advertisement -

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಆಳ್ವಿಕೆಯ ೧೮೮೧ ರಿಂದ ೧೯೪೦ರ ಅವಧಿಯ ವರ್ಷಗಳು ಮೈಸೂರಿನ ಸುವರ್ಣ ಯುಗ ಎಂದು ಡಿವಿಜಿ ಅವರು ಕರೆದರೆ, ಮಹಾತ್ಮಾ ಗಾಂಧೀಜಿಯವರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ‘ರಾಜ ಋಷಿ’ ಎಂದು ಕರೆದು ಅವರ ಆಳ್ವಿಕೆಯ ಮೈಸೂರು ರಾಜ್ಯವನ್ನು ‘ರಾಮ ರಾಜ್ಯ’ ಎಂದು ಕರೆದಿದ್ದರು ಎಂದು ಅವರು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಬೀದಿ ದೀಪಗಳ ಅಳವಡಿಕೆ (ಬೆಂಗಳೂರಿನಲ್ಲಿ), ಶಿವನ ಸಮುದ್ರ ಜಲವಿದ್ಯುತ್ ಕೇಂದ್ರ, ಕರ್ನಾಟಕದ ಪ್ರಪ್ರಥಮ ಆಣೆಕಟ್ಟು ‘ವಾಣಿ ವಿಲಾಸ ಸಾಗರ’, ಭಾರತೀಯ ವಿಜ್ಞಾನ ಸಂಸ್ಥೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯ, ಕೃಷ್ಣ ರಾಜೇಂದ್ರ ಮಾರುಕಟ್ಟೆ, ಕೃಷ್ಣರಾಜ ಸಾಗರ ಆಣೆಕಟ್ಟು ಮುಂತಾದವುಗಳು ರೂಪಗೊಂಡವು ಎಂದು ಹೇಳಿದರು.
ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರಲ್ಲದೆ ಕನ್ನಡದ ಬೆಳವಣಿಗೆಯಲ್ಲಿ ಇವರ ಕೊಡುಗೆ ಅಪಾರ. ಹಿಂದೂ ಸಮಾಜದಲ್ಲಿನ ಅಸಮಾನತೆಯನ್ನು ಮನಗಂಡು ಮಾನವೀಯ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿ ದಲಿತರಿಗೆ ಶಿಕ್ಷಣ ಕಲ್ಪಿಸಿ ಕ್ರಾಂತಿ ಮೂಡಿಸಿದರು. ಇವರ ಕಾಲದಲ್ಲಿ ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ, ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ ಮುಂತಾದ ಕೊಡುಗೆಗಳನ್ನು ನೀಡಿದರು. ಭಾರತದಲ್ಲಿಯೇ ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ ಬೃಹತ್‌ ಜಲಾಶಯ ನಿರ್ಮಾಣಕ್ಕೆ ಕಾರಣೀಭೂತರಾದರು ಎಂದರು.
ಶಿಕ್ಷಕ ಚಾಂದ್‌ಪಾಷ ಮಾತನಾಡಿ, ಒಡೆಯರ ವಂಶದ 34ನೇ ದೊರೆಯಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ 1884 ರ ಜೂನ್‌ 4ರಂದು ಜನಿಸಿ 1895ರಿಂದ 1940 ರವರೆಗೆ ಆಳ್ವಿಕೆ ನೀಡಿ ಮೈಸೂರು ಸಂಸ್ಥಾನವನ್ನು ದೇಶದಲ್ಲಿಯೇ ಮಾದರಿ ಸಂಸ್ಥಾನವಾಗಿ ರೂಪಿಸಿದರು ಎಂದು ಹೇಳಿದರು.
ಆಧುನಿಕ ಇತಿಹಾಸದಲ್ಲಿ ಅಮರವಾಗಿ ಉಳಿಯುವಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೊದಲ ಬಾರಿಗೆ ಭಾರತದಲ್ಲಿ ಕೊಡುಗೆಯಾಗಿ ನೀಡಿದರು. ಪ್ರಜಾಪ್ರತಿನಿಧಿಗಳನ್ನು ಚುನಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೩೮ ವರ್ಷಗಳ ಕಾಲ ದಕ್ಷ ಆಡಳಿತ ನಡೆಸಿ ಪ್ರಜೆಗಳಿಂದ ‘ರಾಜರ್ಷಿ’ ಬಿರುದು ಪಡೆದರು. ತಮ್ಮ ಸಂಸ್ಥಾನದ ಐಳಿಗೆಗಾಗಿ, ತಮ್ಮ ಪ್ರಜೆಗಳ ನೆಮ್ಮದಿ ಬದುಕಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರು. ಸಾಮಾಜಿಕ ಪರಿವರ್ತನೆಯ ರೂವಾರಿಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಗಸ್ಟ್ ೩, ೧೯೪೦ರಲ್ಲಿ ತಮ್ಮ ಇಹಲೋಕದ ಯಾತ್ರೆ ಮುಗಿಸಿದರು ಎಂದು ವಿವರಿಸಿದರು.
ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕ ಅಶೋಕ್‌, ಸಿಬ್ಬಂದಿ ವೆಂಕಟಮ್ಮ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!