21.9 C
Sidlaghatta
Friday, October 10, 2025

ರೇಷ್ಮೆಗೂಡು ಹಾಗೂ ನೂಲಿನ ಬೆಲೆ ಕುಸಿದಿರುವುದನ್ನು ವಿರೋಧಿಸಿ ಪ್ರತಿಭಟನೆ

- Advertisement -
- Advertisement -

ನಗರದ ಸರಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರು ಹಾಗೂ ರೀಲರುಗಳು ಸೇರಿ ರೇಷ್ಮೆಗೂಡು ಹಾಗೂ ನೂಲಿನ ಬೆಲೆ ಕುಸಿದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಚೀನಾದಿಂದ ಆಮದು ಆಗುವ ರೇಷ್ಮೆ ಮೇಲಿನ ಸುಂಕವನ್ನು ಶೇ10ಕ್ಕೆ ಇಳಿಸಿರುವುದರಿಂದ ಆಮದು ರೇಷ್ಮೆ ಪ್ರಮಾಣ ಹೆಚ್ಚಾಗಿ ಸ್ಥಳೀಯ ರೇಷ್ಮೆಗೂಡು, ನೂಲಿಗೆ ಬೆಲೆ ಇಲ್ಲದಂತಾಗಿದೆ ಎಂದು ದೂರಿದರು.
ಇದೀಗ ಕೇಂದ್ರದ ಬಿಜೆಪಿ ಸರಕಾರ ಶೇ 15ರಿಂದ ಶೇ 10ಕ್ಕೆ ಆಮದು ಸುಂಕವನ್ನು ಇಳಿಸಿ ರೈತರು ಹಾಗೂ ರೀಲರುಗಳನ್ನು ನಾಶ ಮಾಡುವಂತ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಇದರಿಂದಾಗಿ ಪ್ರತಿ ಕೆ.ಜಿ ರೇಷ್ಮೆಗೂಡಿನ ಬೆಲೆಯಲ್ಲಿ 100ರೂಪಾಯಿಷ್ಟು ಇಳಿಮುಖಗೊಂಡಿದೆ. ರೇಷ್ಮೆನೂಲಿನ ಬೆಲೆಯೂ ಅಷ್ಟೇ. ಸಾಕಷ್ಟು ಕುಸಿತ ಕಂಡಿದೆ ಎಂದು ಅಂಕಿ ಅಂಶಗಳೊಂದಿಗೆ ಬೆಲೆ ಇಳಿಕೆಯ ವಿವರಗಳನ್ನು ನೀಡಿದರು.
ಇದೀಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ. ಮೊದಲಿನಂತೆ ಆಮದು ಸುಂಕವನ್ನು ಹೆಚ್ಚಿಸಬೇಕೆಂದು ಸಂಬಂಸಿದ ಎಲ್ಲ ಸಚಿವರು, ಉನ್ನತ ಮಟ್ಟದ ಅಕಾರಿಗಳಿಗೆ ಮನವಿ ಮಾಡುತ್ತೇವೆ. ಆಗಲೂ ಸಮಸ್ಯೆ ಬಗೆಹರಿಯಲಿಲ್ಲವೆಂದರೆ ಬೀದಿಗೆ ಇಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್ ಮಾತನಾಡಿ, ಈಗಿನ ಪರಿಸ್ಥಿತಿಯಲ್ಲಿ ರೇಷ್ಮೆಗೂಡಿನ ಉತ್ಪಾಧನಾ ವೆಚ್ಚ ಹೆಚ್ಚಾಗುತ್ತಿದೆ. ಆದರೆ ರೇಷ್ಮೆಗೂಡಿನ ಬೆಲೆ ಕುಸಿಯುತ್ತಿದೆ. ಇದರಿಂದ ರೇಷ್ಮೆ ಬೆಳೆಗಾರರು ಮಾತ್ರವಲ್ಲದೆ ರೀಲರುಗಳೂ ಸಹ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಇಂತಹ ಪರಿಸ್ಥಿತಿ ಇರುವಾಗ ಕೇಂದ್ರ ಸರಕಾರ ಆಮದು ಸುಂಕವನ್ನು ಕಡಿಮೆ ಮಾಡಿ ಈಗಾಗಲೆ ರೈತರಿಗೆ ಆಗಿರುವ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ದೂರಿದರು.
ಈಗಾಗಲೆ ಅಂತರ್ಜಲ ಮಟ್ಟ ಕುಸಿದು ಕೃಷಿಯನ್ನೆ ಕೈ ಬಿಡುವ ಪರಿಸ್ಥಿತಿಯಲ್ಲಿ ರೇಷ್ಮೆ, ಹಾಲು ಮಾತ್ರವೇ ರೈತನ ಕೈ ಹಿಡಿದಿದೆ. ಈ ರೇಷ್ಮೆ ಕೃಷಿಯಲ್ಲಿ ಲಕ್ಷಾಂತರ ರೈತರ ಹಾಗೂ ರೀಲರುಗಳ ಕುಟುಂಬಗಳು ಅವಲಂಬಿತವಾಗಿವೆ.
ಕೇಂದ್ರ ಸರಕಾರ ಈ ಧೋರಣೆಯನ್ನೆ ಅನುಸರಿಸಿದರೆ ರೇಷ್ಮೆ ಉದ್ದಿಮೆಯಲ್ಲಿ ತೊಡಗಿರುವ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಹಾಗಾಗಿ ಈ ಮೊದಲಿನಂತೆ ಶೇ 15ಕ್ಕೆ ಅಥವಾ ಅದಕ್ಕೂ ಮಿಗಿಲಾಗಿ ಆಮದು ಸುಂಕವನ್ನು ಹೆಚ್ಚಿಸುವವರೆಗೂ ನಾವು ವಿರಮಿಸುವ ಪ್ರಶ್ನೆಯೆ ಇಲ್ಲ. ರೈತರು ಹಾಗೂ ರೀಲರುಗಳು ಒಂದಾಗಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಹಸಿರು ಸೇನೆಯ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಅಬ್ಲೂಡು ದೇವರಾಜ್, ರಾಮಕೃಷ್ಣಪ್ಪ, ರಮೇಶ್, ನಾರಾಯಣಸ್ವಾಮಿ, ರೀಲರುಗಳ ಸಂಘದ ಅಧ್ಯಕ್ಷ ಅಕ್ಮಲ್‍ಪಾಷ ಇನ್ನಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!