ರೈತ ಸಂಘದಿಂದ ರಸ್ತೆ ತಡೆ ಮತ್ತು ಪ್ರತಿಭಟನೆ

- Advertisement -
- Advertisement -

ಶಿಡ್ಲಘಟ್ಟ- ಚಿಂತಾಮಣಿ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ರಸ್ತೆಯ ಧೂಳಿನಿಂದ ಅಕ್ಕಪಕ್ಕದ ರೈತರ ತೋಟಗಳಲ್ಲಿನ ಬೆಳೆ ನಾಶವಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ಸೊಣ್ಣೇನಹಳ್ಳಿ ಗೇಟ್ ಬಳಿ ಮಂಗಳವಾರ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸಹಯೋಗದಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ರಾಜ್ಯ ರಸ್ತೆ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ವಿಪರೀತ ಧೂಳಿನಿಂದ ಅಕ್ಕಪಕ್ಕದ ಹಿಪ್ಪುನೇರಳೆ ಸೊಪ್ಪಿನ ಬೆಳೆ, ಮಾವು, ಸಪೋಟ ಮುಂತಾದ ಬೆಳೆಗಳು ನಾಶವಾಗುತ್ತಿದೆ. ರೈತರ ಲಕ್ಷಾಂತರ ರೂಗಳ ಬೆಳೆ ಹಾಳಾಗುತ್ತಿದೆ. ಸೂಕ್ತ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳದೆ, ವಿಳಂಬವಾಗಿ ರಸ್ತೆ ಕಾಮಗಾರಿ ನಡೆಸುತ್ತಿರುವವರ ವಿರುದ್ಧ ರೈತರು ಕಿಡಿಕಾರಿದರು.
ಗೌರಿಬಿದನೂರಿನಿಂದ ಶ್ರೀನಿವಾಸಪುರದವರೆಗೆ ರಾಷ್ಟ್ರೀಯ ಹೆದ್ದಾರಿ ೨೩೪ ರ ಕಾಮಗಾರಿಯು ಅವೈಜ್ಞಾನಿಕವಾಗಿ ನಡೆಯುತ್ತಿದೆ. ಕೆರೆ ಮಣ್ಣನ್ನು ತಂದು ರಸ್ತೆಗೆ ಸುರಿದ ಕಾರಣ ರಸ್ತೆಯೆಲ್ಲಾ ಧೂಳುಮಯವಾಗಿ ಹಗಲಿನಲ್ಲೂ ದೀಪ ಉರಿಸಿಕೊಂಡು ಸಾಗಬೇಕಾಗಿದೆ. ಶಿಡ್ಲಘಟ್ಟ ಮತ್ತು ಚಿಂತಾಮಣಿಯ ನಡುವಿನ ಈ ಕೆಟ್ಟ ಕಾಮಗಾರಿಯಿಂದಾಗಿ ಈಗಾಗಲೇ ಹಲವು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಬಿದ್ದು ಗಾಯಗೊಂಡಿದ್ದಾರೆ ಎಂದು ದೂರಿದರು.
ಅತ್ಯಲ್ಪ ನೀರಿನಲ್ಲಿ ಈ ಭಾಗದ ರೈತರು ಕಷ್ಟಪಟ್ಟು ರೇಷ್ಮೆ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದು, ಈ ರಸ್ತೆಯ ಧೂಳಿನಿಂದ ಹಿಪ್ಪುನೇರಳೆ ಸೊಪ್ಪು ಪ್ರಯೋಜನಕ್ಕೆ ಬಾರದಂತಾಗಿದೆ. ಈ ಸೊಪ್ಪು ದನದ ಮೇವಿಗೂ ಉಪಯುಕ್ತವಾಗಿಲ್ಲ. ರೈತರ ಈ ನಷ್ಟವನ್ನು ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರಿಂದ ಕೊಡಿಸಬೇಕೆಂದು ಪಟ್ಟುಹಿಡಿದರು.
ಪ್ರತಿಭಟನೆಯಿಂದ ಕೆಲ ಕಾಲ ರಸ್ತೆ ಸಂಚಾರ ನಿಂತು ಹೋಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕರೆಸಬೇಕೆಂದು ಪಟ್ಟುಹಿಡಿದ ರೈತರಿಗೆ ನಗರಠಾಣೆ ಪಿಎಸ್ಸೈ ನವೀನ್ ಸಮಾಧಾನ ಹೇಳಿ ಠಾಣೆಯಲ್ಲಿ ಕರೆಸಿ ಮಾತನಾಡೋಣ ಎಂದು ಮನವೊಲಿಸಿದರು. ರಸ್ತೆ ಕಾಮಗಾರಿಗೆ ಸಂಬಂಧಿಸಿದ ವ್ಯವಸ್ಥಾಪಕ ನರಸಿಂಹರೆಡ್ಡಿ ಸ್ಥಳಕ್ಕೆ ಆಗಮಿಸಿ ಗುತ್ತಿಗೆದಾರ ಶಿವಾರೆಡ್ಡಿ ಶಬರಿಮಲೈಗೆ ತೆರಳಿದ್ದಾರೆ, ಶುಕ್ರವಾರ ಬರುತ್ತಾರೆ ಎಂದು ತಿಳಿಸಿದಾಗ, ಶುಕ್ರವಾರ ಠಾಣೆಯಲ್ಲಿ ಸಭೆ ಸೇರಲು ತೀರ್ಮಾನಿಸಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ದೇವರಾಜು, ಪ್ರಭಾಕರ್, ಗೋವಿಂದ, ದೇವರಾಜಪ್ಪ, ಮುನಿಯಪ್ಪ, ಸಿದ್ದಪ್ಪ, ಕುಮಾರ್‌, ರಾಮಾಂಜಿನಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!