ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಉತ್ತಮ ಸೇವೆ ಕಲ್ಪಿಸಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕು ಹಾಗೂ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರಿಗೆ ಗುರುವಾರ ಮನವಿಯನ್ನು ಸಲ್ಲಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಕೆಲ ವೈದ್ಯರು ಹಾಗೂ ಸಿಬ್ಬಂದಿ ಚಿಕಿತ್ಸೆ ಸಂದರ್ಭದಲ್ಲಿ, ಹೆರಿಗೆ ಹಾಗೂ ಸ್ಕ್ಯಾನಿಂಗ್ ಮಾಡಿಸಲು ಹಣವನ್ನು ಪಡೆಯುತ್ತಿದ್ದಾರೆ. ಸರ್ಕಾರಿ ಅನುದಾನಗಳು ಸದುಪಯೋಗವಾಗುತ್ತಿಲ್ಲ. ಆಯುಷ್ ಮಾನ್ ಭಾರತ್ ಆರೋಗ್ಯ ಕಾರ್ಡುಗಳನ್ನು ವಿತರಣೆಯ ವ್ಯವಸ್ಥೆ ಸರಿಯಾಗಿಲ್ಲದೆ, ಫಲಾನುಭವಿಗಳಿಗೆ ತಲುಪದಂತಾಗಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ, ಮೂಲಭೂತ ಸೌಕರ್ಯಗಳು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ಸಮರ್ಪಕವಾಗಿಲ್ಲ. ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯ ಮೂಲಕ ಚಳುವಳಿ ಹಮ್ಮಿಕೊಳ್ಳುತ್ತೇವೆ ಎಂದು ವೈದ್ಯಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ವಾಣಿ ಅವರೊಂದಿಗೆ ಚರ್ಚಿಸಿ ಎಲ್ಲಾ ನ್ಯೂನತೆಗಳನ್ನು ಸರಿಪಡಿಸುತ್ತೇನೆ. ಚುನಾವಣೆ ಮುಗಿದ ನಂತರ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಅನುಮೋದನೆ ಪಡೆದು ಸಿಸಿ ಕ್ಯಾಮೆರಾ ಅಳವಡಿಸುವ ಹಾಗೂ ಕಾವಲುಗಾರನನ್ನು ನೇಮಿಸುವ ಮತ್ತು ವಾಹನ ನಿಲುಗಡೆಯ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶವಿದೆ ಎಂದು ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಎನ್.ನಾಗರಾಜ, ಸಿ.ಎನ್.ಶ್ರೀಧರ, ಎಂ.ಎಸ್.ಮಂಜುನಾಥ, ಕೋಟೆ ಚನ್ನೇಗೌಡ, ರಮೇಶ್, ಆನಂದ್, ಅಶ್ವತ್ಥನಾರಾಯಣ ಹಾಜರಿದ್ದರು.
- Advertisement -
- Advertisement -
- Advertisement -