ತಾಲ್ಲೂಕಿನಾಧ್ಯಂತ ಸಾಗುವಳಿ ಚೀಟಿ ವಿತರಿಸಿರುವ ರೈತರಿಗೆ ಸಾಗುವಳಿ ಚೀಟಿಯಂತೆ ಖಾತೆ ಮಾಡಿಕೊಡುವುದು ಹಾಗೂ ಈವರೆಗೂ ಸಾಗುವಳಿ ಚೀಟಿ ವಿತರಿಸದೇ ಇರುವ ರೈತರಿಗೆ ಕೂಡಲೇ ಸಾಗುವಳಿ ಚೀಟಿ ವಿತರಿಸಬೇಕು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲ್ಲೂಕಿನಾಧ್ಯಂತ ಬರಗಾಲ ತಾಂಡವವಾಡುತ್ತಿದ್ದು ಇರುವ ಅಲ್ಪಸ್ವಲ್ಪ ನೀರಿನಲ್ಲಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೇ ರೈತ ಕಂಗಾಲಾಗಿದ್ದಾನೆ.
ಇಂತಹ ಸಂದರ್ಭದಲ್ಲಿ ಸಾಗುವಳಿ ಚೀಟಿಯಂತೆ ಖಾತೆ ಮಾಡಿಕೊಡಿ ಎಂದು ತಾಲ್ಲೂಕು ಕಚೇರಿಗೆ ಬಂದರೆ ಅಧಿಕಾರಿಗಳು ವಿನಾಕಾರಣ ರೈತರನ್ನು ಅಲೆದಾಡಿಸುತ್ತಾರೆ. ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಕೆಲ ಅಧಿಕಾರಿಗಳು ಕಾನೂನು ಅರಿವಿಲ್ಲದ ಹಾಗೆ ವರ್ತಿಸುತ್ತಿದ್ದು ಅಂತಹ ಅಧಿಕಾರಿಗಳನ್ನು ಕೂಡಲೇ ಇಲ್ಲಿಂದ ವರ್ಗಾವಣೆಗೊಳಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಎಂ.ದಯಾನಂದ್ ಪ್ರತಿಭಟನಾನಿರತರೊಂದಿಗೆ ಮಾತನಾಡಿ ಮನವೊಲಿಸಲು ಯತ್ನಿಸದರಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದ ಕಾರಣ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಮಾತನಾಡಿ, ತಾಲ್ಲೂಕು ಕಚೇರಿಯ ಸಿಬ್ಬಂದಿಯಿಂದ ವಿನಾಕಾರಣ ಕೆಲಸ ಕಾರ್ಯಗಳು ತಡವಾಗುವುದು ಮತ್ತು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಲು ಅಗತ್ಯ ಕ್ರಮ ಜರುಗಿಸಲಾಗುವುದು. ರೈತರ ಕೆಲಸ ಕಾರ್ಯಗಳು ತಹಶೀಲ್ದಾರ್ ಕಚೇರಿಯ ಹಂತದಲ್ಲಿದ್ದರೆ ಅಂತಹ ಕೆಲಸ ಕಾರ್ಯಗಳು ಇಲ್ಲಿಯೇ ಮಾಡಿಕೊಡಲಾಗುವುದು. ಇನ್ನು ಜಿಲ್ಲಾ ಹಂತದ ಕೆಲಸ ಕಾರ್ಯಗಳಾದರೆ ನಮ್ಮಲ್ಲಿ ಮಾಡಿಕೊಡಬಹುದು. ಕೆಲವೊಮ್ಮ ರೈತರ ಕೆಲಸ ಕಾರ್ಯಗಳು ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿರುವುದರಿಂದ ತಡವಾಗಬಹುದು. ತಾವು ನೀಡಿರುವ ಮನವಿ ಪತ್ರದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್. ಗೌರವಾಧ್ಯಕ್ಷ ಸೊಣ್ಣೇನಹಳ್ಳಿ ಎಸ್.ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷ ಮನಿನಂಜಪ್ಪ. ಕಾರ್ಯದರ್ಶಿ ಕೃಷ್ಣಪ್ಪ. ಪದಾಧಿಕಾರಿಗಳಾದ ಎಂ.ರಮೇಶ್. ರಾಮಚಂದ್ರಪ್ಪ. ನರಸಿಂಹಪ್ಪ. ವೇಣುಗೋಪಾಲ್ ಹಾಜರಿದ್ದರು.
- Advertisement -
- Advertisement -
- Advertisement -