ನಗರದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಹಂತದ ಶಾಲಾ ಪ್ರಾರಂಭೋತ್ಸವ ಹಾಗೂ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಮ್ಮ ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಎಲ್ಲಾ ಶಿಕ್ಷಕರ ಸಂಘಿಕ ಪರಿಶ್ರಮದ ಫಲ ಎಂದು ಅವರು ತಿಳಿಸಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ನಮ್ಮ ತಾಲ್ಲೂಕು ೩೯ ನೇ ಸ್ಥಾನದಲ್ಲಿದೆ. ಈ ವರ್ಷ ನಾವುಗಳು ಇನ್ನಷ್ಟು ಪರಿಶ್ರಮದ ಮೂಲಕ ಏರುಗತಿಯತ್ತ ಸಾಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಒತ್ತಡ ಹೇರದೆ ಕಲಿಕೆಯ ಪ್ರಗತಿಯನ್ನು ಸಾಧಿಸುವುದು ಸವಾಲಿನ ಕೆಲಸ. ಹಲವು ರೀತಿಯ ಒತ್ತಡಗಳ ನಡುವೆಯೂ ಶಿಕ್ಷಕರು ಕೆಲಸ ಮಾಡಬೇಕಿದೆ. ನಮ್ಮ ಮೌಲ್ಯಮಾಪನವನ್ನು ಮಕ್ಕಳ ಅಂಕಗಳಿಂದ ಮಾಡುವುದಿಲ್ಲವಾದರೂ, ಅಂಕೆ ಸಂಖ್ಯೆಗಳೇ ಮುಖ್ಯವಾಗುತ್ತದೆ. ನಮ್ಮ ಸೇವೆಯನ್ನು ಒರೆಗೆ ಹಚ್ಚುವ ಕೆಲಸ ಆಗುತ್ತಿದೆ. ಶಿಕ್ಷಕರು ಇದನ್ನು ಸವಾಲಾಗಿ ಪರಿಗಣಿಸಿ, ಮಕ್ಕಳ ಕಲಿಕೆ ಮತ್ತು ಅಂಕ ಗಳಿಗೆ ಹೆಚ್ಚಿಸಲು ತಮ್ಮ ಅನುಭವ ಮತ್ತು ತಂತ್ರಜ್ಞಾನದ ಉಪಯೋಗ ಪಡೆದು ಹೊಸ ಮಾರ್ಗಗಳ ಅನ್ವೇಷಕರಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶೇ ೧೦೦, ಶೇ ೮೫ ಕ್ಕಿಂತ ಹೆಚ್ಚು ಮತ್ತು ಶೇ ೮೫ ರವರೆಗೂ ಫಲಿತಾಂಶ ದಾಖಲಿಸಿದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಅಭಿನಂದನಾ ಪತ್ರವನ್ನು ನೀಡಲಾಯಿತು. ಸಾಂಕೇತಿಕವಾಗಿ ಕೆಲವು ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಶೂ ವಿತರಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ತಾವು ತಯಾರಿಸಿದ ಬೀಜದ ಉಂಡೆಗಳನ್ನು ಎಲ್ಲಾ ಮುಖ್ಯಶಿಕ್ಷಕರಿಗೂ ನೀಡಿ ಶಾಲೆಗಳಲ್ಲಿ ನೆಡುವಂತೆ ವಿನಂತಿಸಿದರು.
ಶಿಕ್ಷಣ ಸಂಯೋಜಕ ಶಿಕ್ಷಕರಾದ ಬೈರಾರೆಡ್ಡಿ, ಶಿಕ್ಷಕರಾದ ಬೈರಾರೆಡ್ಡಿ, ಎಲ್.ವಿ.ವೆಂಕಟರೆಡ್ಡಿ, ಸಿ.ಎಂ.ಮುನಿರಾಜು, ನಾರಾಯಣಸ್ವಾಮಿ, ಮಂಜುನಾಥ್, ಪಿಳ್ಳಣ್ಣ, ಗೋಪಿನಾಥ್, ಪರಮರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -