ನಗರದ ಉಲ್ಲೂರುಪೇಟೆಯ ಮಾರಮ್ಮ ದೇವಿ, ಕಾಮಾಟಿಗರ ಪೇಟೆಯಲ್ಲಿರುವ ಗ್ರಾಮದೇವತೆ ಗಂಗಮ್ಮದೇವಿ ಹಾಗೂ ಕರಗದಮ್ಮ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಜಾತ್ರೆಯ ಅಂಗವಾಗಿ ಉಲ್ಲೂರುಪೇಟೆಯ ಮಾರಮ್ಮ ದೇವಿ, ಗ್ರಾಮದೇವತೆ ಶ್ರೀಗಂಗಮ್ಮ ದೇವಿ ಹಾಗೂ ಕರಗದಮ್ಮ ದೇವಿಯ ದೇವಾಲಯಗಳನ್ನು ಬಣ್ಣದಿಂದ ಹಾಗೂ ನಾನಾ ವಿಧದ ಹೂಗಳಿಂದ ಸಿಂಗಾರಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಾವು ಬೇವು ಬಾಳೆ ದಿಂಡಿನ ತಳಿರು ತೋರಣಗಳಿಂದ ದೇವಾಲಯಗಳು ಕಂಗೊಳಿಸುತ್ತಿತ್ತು.
ಸೋಮವಾರ ಗಂಡು ದೇವರುಗಳಾದ ಶ್ರೀರಾಮ, ಬಸವಣ್ಣ ದೇವರುಗಳಿಗೆ ದೀಪೋತ್ಸವವನ್ನು ನೆರವೇರಿಸಿದ ಮಹಿಳೆಯರು, ದೇವಾಲಯಗಳಲ್ಲಿ ಗಂಗಾ ಪೂಜೆಯೊಂದಿಗೆ ಜಾತ್ರಾ ಮಹೋತ್ಸವದ ಪೂಜೆಯನ್ನು ಆರಂಭಿಸಿದ್ದರು. ನಾನಾ ಹೋಮ ಹವನ ಹಾಗೂ ವಿದವಿಧದ ಪೂಜೆಗಳನ್ನು ನೆರವೇರಿದ್ದು ಮಂಗಳವಾರ ದೀಪೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ನಗರದಲ್ಲಿ ಹೆಣ್ಣುಮಕ್ಕಳು, ಮುತ್ತೈದೆಯರು ಅಲಂಕೃತರಾಗಿ ಅಂದ ಚೆಂದದ ಹೂವುಗಳಿಂದ ಅಲಂಕರಿಸಿದ ತಂಬಿಟ್ಟಿನ ದೀಪಗಳನ್ನು ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಆಗಮಿಸಿ ಮೂರು ದೇವತೆಯರಿಗೂ ಆರತಿ ಬೆಳಗಿದರು.
ತಮ್ಮ ಇಷ್ಟಾರ್ಥಗಳು ಈಡೇರಲಿ, ಕಾಲ ಕಾಲಕ್ಕೆ ಮಳೆಯಾಗಿ ಮಳೆಯಿಂದ ಬೆಳೆಯಾಗಿ ಎಲ್ಲರ ಮನೆ ಮನೆಗಳಲ್ಲೂ ದವಸ ದಾನ್ಯ ತುಂಬಲಿ. ಸುಖ ಶಾಂತಿ ನೆಮ್ಮದಿ ನೆಲಸಲಿ ಎಂದು ಭಗವಂತನಲ್ಲಿ ಕೈ ಮುಗಿದು ಪ್ರಾರ್ಥಿಸಿದರು. ಮೂರು ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ನೈವೇದ್ಯ ಅರ್ಪಿಸಿ ಎಲ್ಲ ಭಕ್ತರಿಗೂ ತೀರ್ಥ ಪ್ರಸಾದವನ್ನು ವಿತರಿಸಲಾಯಿತು.
“ಮಾರಮ್ಮ, ಗಂಗಮ್ಮ ಹಾಗೂ ಕರಗದಮ್ಮ ದೇವಿಯ ದೀಪೋತ್ಸವಗಳನ್ನು ಮಾಡುವುದರಿಂದ ತಾಲ್ಲೂಕಿನಲ್ಲಿ ಉತ್ತಮವಾದ ಮಳೆಯಾಗುವುದರ ನಗರಕ್ಕೆ ಹೊಂದಿಕೊಂಡ ಕೆರೆಗಳು ಸಂಪೂರ್ಣವಾಗಿ ತುಂಬಿ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿ. ನಾಡು ಸುಭಿಕ್ಷವಾಗಲಿ ಎಂಬ ಸದಾಶಯದಿಂದ ಎಲ್ಲರೂ ಒಗ್ಗೂಡಿ ಈ ಆಚರಣೆಯನ್ನು ನಡೆಸಿದ್ದೇವೆ” ಎಂದು ಉಲ್ಲೂರುಪೇಟೆಯ ಪುರುಷೋತ್ತಮ್ ತಿಳಿಸಿದರು.
- Advertisement -
- Advertisement -
- Advertisement -