ನಮ್ಮ ಶಿಡ್ಲಘಟ್ಟ ತಾಲ್ಲೂಕು ಹಿಂದೆ ಪೈಲ್ವಾನರಿಗೆ ಹೆಸರಾಗಿತ್ತು. ಹಲವಾರು ಹೆಸರುವಾಸಿ ಗರಡಿ ಮನೆಗಳಿದ್ದವು. ಹಲವಾರು ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿದ್ದವು. ಹಿರಿಯ ಪೈಲ್ವಾನರ ಮಾರ್ಗದರ್ಶನದಲ್ಲಿ ಯುವಕರು ತರಬೇತಿ ಪಡೆಯುತ್ತಿದ್ದ ಕಾಲವೊಂದಿತ್ತು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಗರದ ಗಾರ್ಡನ್ ರಸ್ತೆಯಲ್ಲಿರುವ ಹೈದರಾಲಿ ಗರಡಿ ಮನೆಯ ಮಹಮದ್ ಖಾನ್ ಬೆಂಗಳೂರಿನ ಅಗ್ರಹಾರದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕವನ್ನು ಪಡೆದಿರುವುದಕ್ಕೆ ಸನ್ಮಾನಿಸಿ ಅವರು ಮಾತನಾಡಿದರು.
ಇಂದು ಜಿಮ್ ತಲೆ ಎತ್ತಿ ನಿಂತಿವೆ. ಸಿಕ್ಸ್ಪ್ಯಾಕ್ ಮೋಹಕ್ಕೆ ಒಳಗಾಗಿರುವ ಯುವಕರು ಆಧುನಿಕ ಉಪಕರಣಗಳನ್ನು ಬಳಸಿ ಕಸರತ್ತಿಗೆ ಜೋತುಬಿದ್ದಿದ್ದಾರೆ. ಹೀಗಾಗಿ ಆರೋಗ್ಯದ ಜತೆಗೆ ಯುವಕರಿಗೆ ಶ್ರದ್ಧೆ, ಶಿಸ್ತು, ಭಕ್ತಿಯನ್ನು ಕಲಿಸುತ್ತಿದ್ದ ಶಕ್ತಿಯ ಪ್ರತೀಕವಾಗಿದ್ದ ದೇಸಿ ಪರಂಪರೆಯ ಕುಸ್ತಿ ಕಲೆ ಮತ್ತು ಗರಡಿ ಮನೆಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿವೆ. ಹಲವು ಸಂಕಷ್ಟದ ನಡುವೆಯೂ ಆಧುನಿಕತೆಯೊಂದಿಗೆ ರಾಜಿ ಮಾಡಿಕೊಳ್ಳದೇ ತಮ್ಮ ಹಳೆಯ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವ ಗರಡಿ ಮನೆಗಳು ಇನ್ನೂ ಜೀವಂತವಾಗಿರುವುದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.
ಹೈದರಾಲಿ ಗರಡಿ ಮನೆಯ ಮಹಮದ್ ಖಾನ್, ಹಿರಿಯ ಪೈಲ್ವಾನರಾದ ಉಸ್ತಾದ್ ಅಮ್ಜದ್‌ಪಾಷ, ಖಾದರ್‌ಪಾಷ, ಎಂ.ಡಿ.ಮೌಲಾ ಅವರಿಂದ ತರಬೇತಿ ಪಡೆದಿದ್ದು, ರಾಜ್ಯ ಮಟ್ಟದ ಕುಸ್ತಿ ಪಂದ್ಯದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಅವರ ಸಾಧನೆ ಯುವ ಕುಸ್ತಿ ಪಟುಗಳಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಸಿ.ಎಂ.ಬಾಬು, ಪೈಲ್ವಾನ್ ಆದಿಲ್‌ಪಾಷ, ಮಹಮ್ಮದ್, ಎ.ಆರ್.ರಫೀಕ್, ಖಾದರ್‌ಪಾಷ, ಅಕ್ರಂಪಾಷ, ಬಾಬು, ಬಾಬಾಜಾನ್, ಮುಕ್ತಿಯಾರ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -