21.1 C
Sidlaghatta
Wednesday, December 24, 2025

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ “ವಿದ್ಯಾವಿಕಾಸ ಯೋಜನೆ” ಗೆ ಚಾಲನೆ

- Advertisement -
- Advertisement -

ಜಾತಿ ಮತ ಭೇದವಿಲ್ಲದೆ ಶಿಕ್ಷಣ ಎಲ್ಲರಿಗೂ ಸಿಗಬೇಕು. ಕೆಳವರ್ಗದವರನ್ನು ಶಿಕ್ಷಣ ಮತ್ತು ಸಂಸ್ಕಾರ ಕಲಿಸುವ ಮೂಲಕ ಸದೃಢಗೊಳಿಸುವ ಕೆಲಸವನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮೂಲಕ ಕೈಗೊಳ್ಳಲಾಗಿದೆ. ಈ ಕೆಲಸದ ಅಂಗವಾಗಿ ತಾತಹಳ್ಳಿ ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಮೂಲಕ ಗ್ರಾಮೀಣಾಭಿವೃದ್ಧಿಯನ್ನು ಸಹ ಮಾಡಲಾಗುವುದು ಎಂದು ಶ್ರೀ ಆದಿಚುಂಚನಗಿರಿ ಮಠದ ಮಂಗಳನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಸಂಜೆ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ “ವಿದ್ಯಾವಿಕಾಸ ಯೋಜನೆ” ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಭಾನ್ವಿತ ಬಡ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ವಸತಿ, ವಿದ್ಯೆ ನೀಡಲಾಗುವುದು. ಮಕ್ಕಳನ್ನು ಸರ್ವಾಂಗೀಣ ಸಂಪನ್ನತೆಯನ್ನಾಗಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮಕ್ಕಳ ಜ್ಞಾನಾರ್ಜನೆಗೆ ಪೋಷಕರು ಸಹಕಾರ ನೀಡಬೇಕಾಗಿದೆ. ಈ ಯೋಜನೆಯನ್ವಯ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ.ಎನ್‌.ಶಿವರಾಮರೆಡ್ಡಿ ಮಾತನಾಡಿ, ಪೂಜ್ಯ ಸ್ವಾಮೀಜಿಯವರ ಮಹತ್ತರ ಸ್ಮರಣೀಯ ಯೋಜನೆ ಇದಾಗಿದೆ. ನಿರ್ಲಕ್ಷಿತ ಮಕ್ಕಳ ಶ್ರೇಯೋಭಿಲಾಷೆಯೆ ಪರಮಗುರಿಯಾಗಿದ್ದು, ಗ್ರಾಮದ ಪೋಷಕರು ಮಕ್ಕಳನ್ನು ಪ್ರತಿದಿನ ಸಂಜೆ ೨ ಗಂಟೆ ಕಾಲ ನಮಗೆ ಕೊಡಿ. ಅವರು ನಮ್ಮ ಮಕ್ಕಳೆಂದೇ ತಿಳಿದು ಉತ್ತಮ ಸಂಸ್ಕಾರವನ್ನು ನೀಡುತ್ತೇವೆ. ಇದಕ್ಕೆ ನೀವು ಹಣ ಕೊಡಬೇಕಾಗಿಲ್ಲ. ನಮ್ಮದು ಉಚಿತ ಶಿಕ್ಷಣವಾಗಿದೆ. ಇದಕ್ಕಾಗಿಯೆ ನಮ್ಮ ಶಾಲಾ ಶಿಕ್ಷಕರು ಬಹಳ ಸಂತೋಷದಿಂದ ಪಾಠಮಾಡಲು ಉತ್ಸಾಹಿಗಳಾಗಿ ಮುಂದೆ ಬಂದಿದ್ದಾರೆ. ಈ ಮಕ್ಕಳು ಮುಂದೆ ಸಮಾಜಕ್ಕೆ ಉತ್ತಮ ಆಸ್ತಿಯಾಗುತ್ತಾರೆ ಎಂದು ಹೇಳಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮಹದೇವ್ ಮಾತನಾಡಿ, ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಯ ಮಕ್ಕಳನ್ನು ನಮ್ಮ ಶಿಕ್ಷಣ ಸಂಸ್ಥೆಗೆ ಸೇರಿಸಿಕೊಳ್ಳುವುದಿಲ್ಲ. ಬದಲಿಗೆ ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸವನ್ನು ಈ ಯೋಜನೆಯ ಮೂಲಕ ಮಾಡುತ್ತೇವೆ. ಪ್ರತಿದಿನ ಸಂಜೆ ೬ ರಿಂದ ೮ ಗಂಟೆಯವರೆಗೂ ಮಕ್ಕಳಿಗೆ ಶಿಕ್ಷಣ, ಕಲಿಕೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ನಮ್ಮ ಸಂಸ್ಥೆಯ ಶಿಕ್ಷಕರ ಮೂಲಕ ಮಾಡಿಸಲಾಗುವುದು. ಗ್ರಾಮಸ್ಥರ ಸಹಕಾರದಿಂದ ಗ್ರಾಮೀಣ ಅಭಿವೃದ್ಧಿಯನ್ನು ಸಹ ಮಾಡಲಾಗುವುದು ಎಂದು ನುಡಿದರು.
ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್ ಮಾತನಾಡಿ, ಕಡ್ಡಾಯ ಶಿಕ್ಷಣ, ಸಮಾನತೆ ಆರ್ಥಿಕ ಮುಗ್ಗಟ್ಟು ನಿವಾರಿಸಿ ಅಕ್ಷರಸ್ಥರನ್ನಾಗಿಸುವ ಆಶೋತ್ತರಗಳನ್ನು ಭಾರತದ ಸಂವಿಧಾನ ಹೊಂದಿದೆ. ಇದನ್ನು ಎಲ್ಲರೂ ಅಳವಡಿಸಿಕೊಂಡರೆ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಅಕ್ಷತೆಯಿರುವ ತಟ್ಟೆಯಲ್ಲಿ ಅರಿಶಿನ ಕೊಂಬನ್ನು ಮಕ್ಕಳ ಕೈಲಿ ಹಿಡಿಸಿ ಮಂಗಳನಾಥ ಸ್ವಾಮೀಜಿ ಅಕ್ಷರಾಭ್ಯಾಸ ಮಾಡಿಸಿದರು. ಗ್ರಾಮದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೂ ನೋಟ್ ಪುಸ್ತಕಗಳು, ಲೇಖನ ಸಾಮಗ್ರಿ ಹಾಗೂ ಸಿಹಿಯನ್ನು ನೀಡಲಾಯಿತು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಗೌಡ, ವಕೀಲರಾದ ಮಂಜುನಾಥ, ಲೋಕೇಶ, ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣಪ್ಪ, ಕನಕಪ್ರಸಾದ್, ಜೆ.ಎಸ್.ವೆಂಕಟಸ್ವಾಮಿ, ಶಿಕ್ಷಕರಾದ ಎಂ.ದೇವರಾಜ್, ಡಿ.ಎಸ್.ಶ್ರೀಕಾಂತ್, ಕೆ.ನಾಗರಾಜ್, ಶ್ರೀನಿವಾಸಯಾದವ್, ಜೈಭಾರತ್ ಯುವಕ ಸಂಘದ ಸದಸ್ಯರು, ಗ್ರಾಮದ ನಾರಾಯಣಸ್ವಾಮಿ, ನರಸಿಂಹಪ್ಪ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!