ಸಮಾಜದಲ್ಲಿರುವ ಪ್ರತಿಯೊಬ್ಬರು ಜಾತಿ ಮತ ಭೇದ ಮರೆತು ವಿದ್ಯಾವಂತರಾಗಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಹೀಗಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ೯೩ ಲಕ್ಷ ರೂಗಳ ವೆಚ್ಚದಲ್ಲಿ ನೂತನ ಕೊಠಡಿಗಳು ಮತ್ತು ಪ್ರಯೋಗಾಲಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಶಿಥಿಲ ಅವಸ್ಥೆಯಲ್ಲಿರುವ ಶಾಲಾ-ಕಾಲೇಜು ಮತ್ತು ವಿದ್ಯಾರ್ಥಿನಿಲಯಗಳ ಮಾಹಿತಿ ನೀಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲ್ಲೂಕಿನಾದ್ಯಂತ ಸುಮಾರು ೧೦ ಸರ್ಕಾರಿ ಪ್ರೌಢಶಾಲೆಗಳ ದುರಸ್ಥಿಗೆ ಕ್ರಮ ಕೈಗೊಳ್ಳಲು ಕ್ಷೇತ್ರ ಶಿಕ್ಷಾಧಿಕಾರಿಗಳ ಮೂಲಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ವಿದ್ಯಾರ್ಥಿನಿಲಯಗಳ ಸಮಸ್ಯೆಗಳಿದ್ದಲ್ಲಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದೇ ನಮ್ಮ ಆಶಯ ಮತ್ತು ಮುಖ್ಯ ಗುರಿ. ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣದ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಯೋಜನೆಯನ್ನು ರೂಪಿಸಿ ಹಂತ ಹಂತವಾಗಿ ಅನುಷ್ಠಾನಗೊಳಿಸಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಅಂಗನವಾಡಿ ಕೇಂದ್ರದ ಕಟ್ಟಡಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಸರ್ಕಾರಿ ಶಾಲೆಗಳಿಗೆ ಭದ್ರತೆ ವ್ಯವಸ್ಥೆ ಮಾಡಲು ಕಾಂಪೌಂಡ್ ನಿರ್ಮಿಸಲಾಗುತ್ತದೆ. ಉತ್ತಮ ಪರಿಸರದಲ್ಲಿ ಶಿಕ್ಷಣ ಪಡೆಯಲು ಎಲ್ಲಾ ರೀತಿಯ ವ್ಯವಸ್ಥೆ ಒದಗಿಸಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಗಮನಹರಿಸಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಆನಂದ್, ಉಪನ್ಯಾಸಕ ಮುನಿರಾಜು, ವಿ.ಸುಭ್ರಮಣಿ, ಎಂಜಿನಿಯರ್ ನಾರಾಯಣಸ್ವಾಮಿ, ರಾಜಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -