ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ತಮ್ಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ಮೂಲಕ ತರಗತಿಗಳನ್ನು ಪ್ರಾರಂಭಿಸಿದ್ದಾರೆ.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿರುವ ಕಾರಣದಿಂದ ವಿದ್ಯಾರ್ಥಿಗಳು ವರ್ಷವಿಡೀ ಕಲಿತ ಪಾಠಗಳನ್ನು ಮರೆತುಹೋಗಬಹುದು. ಆದ್ದರಿಂದ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಆನ್ ಲೈನ್ ಮೂಲಕ ಪಾಠ ಮಾಡಲು ಮುಂದಾಗಿದ್ದಾರೆ.
“ಸ್ಮಾರ್ಟ್ ಫೋನ್ ಹೊಂದಿರುವ ವಿದ್ಯಾರ್ಥಿಗಳ ವ್ಯಾಟ್ಸಪ್ ಗ್ರೂಪ್ ಮಾಡಿ ಅವರಿಗೆ ಜೂಮ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ತಿಳಿಸಲಾಗಿದೆ. ಆನ್ ಲೈನ್ ಬೋಧನೆಯ ವಿಷಯ, ಅವಧಿ, ಮೀಟಿಂಗ್ ಐಡಿ ಮತ್ತು ಪಾಸ್ ವರ್ಡನ್ನು ವ್ಯಾಟ್ಸಪ್ ಗ್ರೂಪ್ ಗೆ ಕಳುಹಿಸಿ ನಿಗಧಿತ ಸಮಯಕ್ಕೆ ಸರಿಯಾಗಿ ಆನ್ ಲೈನ್ ತರಗತಿಯಲ್ಲಿ ಭಾಗವಹಿಸಲು ತಿಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಕರ ಸಂಪರ್ಕದಲ್ಲಿರುತ್ತಾರೆ. ವೇಳಪಟ್ಟಿಯಂತೆ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಒಂದು ವಿಷಯದ ತರಗತಿ ನಡೆಸುತ್ತಿದ್ದೇವೆ” ಎಂದು ಮುಖ್ಯ ಶಿಕ್ಷಕಿ ಹೇಮಾವತಿ ತಿಳಿಸಿದರು.
“50 ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇದ್ದಾರೆ. ಅವರಲ್ಲಿ 16 ಮಕ್ಕಳ ಬಳಿ ಸ್ಮಾರ್ಟ್ ಫೋನ್ ಇಲ್ಲ. ಅವರನ್ನು ಸ್ಮಾರ್ಟ್ ಫೋನ್ ಇರುವ ಮಕ್ಕಳೊಂದಿಗೆ ಜೊತೆಗೂಡಿಸಿದ್ದೇವೆ. ಕಳೆದ ಎರಡು ದಿನಗಳಿಂದ ಕನ್ನಡ ಮತ್ತು ಹಿಂದಿ ತರಗತಿಗಳನ್ನು ನಡೆಸಿದೆವು. ಶುಕ್ರವಾರ ಆಂಗ್ಲ ಭಾಷಾ ವಿಷಯ ಶಿಕ್ಷಕಿ ವಿಜಯಶ್ರೀ ಅವರು ಪ್ರಶ್ನೆಪತ್ರಿಕೆಯ ವಿನ್ಯಾಸ ಹಾಗೂ ಪಾಠ ಪದ್ಯಗಳಲ್ಲಿ ಬರುವ ಸಂಭವನೀಯ ಪ್ರಶ್ನೆಗಳ ಬಗ್ಗೆ ತಿಳಿಸಿದರು .ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡರು. ಈ ಆನ್ ಲೈನ್ ತರಗತಿಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ನೋಡೆಲ್ ಅಧಿಕಾರಿಗಳು ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಇಂಗ್ಲೀಷ್ ವಿಷಯ ಪರಿವೀಕ್ಷಕಿ ಕೃಷ್ಣಕುಮಾರಿ ಅವರು ಭಾಗವಹಿಸಿದ್ದರು” ಎಂದು ಅವರು ವಿವರಿಸಿದರು.
- Advertisement -
- Advertisement -
- Advertisement -