ರಾಜ್ಯ ಸರ್ಕಾರ ಹೇಳುವ ಪಾರದರ್ಶಕ, ಪರಿಣಾಮಕಾರಿ ಮತ್ತು ಜನಪರ ಆಡಳಿತ ಎಂಬುದು ಕೇವಲ ಘೋಷಣೆಗಳಲ್ಲಿ ಮಾತ್ರವೇ ಉಳಿದಿದೆ. ಆದರೆ ಸರ್ಕಾರಿ ಸರ್ವೆ ನಂಬರುಗಳಿಗೆ ಹಕ್ಕುದಾರಿಕೆಯನ್ನು ಕೊಡುವ ಮೂಲಕ ಶಿಡ್ಲಘಟ್ಟದ ತಾಲ್ಲೂಕು ಕಚೇರಿ ಪಾರದರ್ಶಕತೆಯನ್ನು ಮೆರೆದಿದೆ ಎಂದು ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ವ್ಯಂಗ್ಯವಾಡಿದರು.
ನಗರಸ ತಾಲ್ಲೂಕು ಕಚೇರಿಯ ಮುಂದೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ(ಎ.ಪಿ.ಎಂ.ಸಿ) ಚುನಾವಣೆಗೆ ಮತದಾರರ ಸೇರ್ಪಡೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಇದರಲ್ಲಿ ಶಾಮಿಲಾಗಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಾಸಕ ಎಂ.ರಾಜಣ್ಣ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಯಾವ ರೀತಿ ಅಕ್ರಮ ನಡೆಯಿತು. ಅದಕ್ಕೆ ಕಾರಣರಾದವರು ಯಾರು. ಅಧಿಕಾರಿಗಳ ಕಣ್ಣಿಗೆ ಬೀಳದಂತೆ ಅಕ್ರಮಗಳು ನಡೆಯಲು ಸಾಧ್ಯವೆ. ಸರ್ಕಾರಿ ಸರ್ವೆ ನಂಬರುಗಳಿಗೆ ಯಾರು ಬೇಕಾದರೂ ಹಕ್ಕುದಾರರಾಗಲು ಬಿಟ್ಟ ಅಧಿಕಾರಿಗಳು ಇರಬಾರದು. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಕಾರ್ಯಕರ್ತರು ನಡೆಸಿದ್ದ ಅಹೋರಾತ್ರಿ ಪ್ರತಿಭಟನೆಯ ಸ್ಥಳಕ್ಕೆ ಸೋಮವಾರ ರಾತ್ರಿ ಜಿಲ್ಲಾಧಿಕಾರಿ ಅದಿತ್ಯ ದೀಪ್ತಿ ಕಾನಡೆ ಅವರು ಆಗಮಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಮೌಖಿಕವಾಗಿ ತಿಳಿಸಿದರು. ಆದರೆ ಪ್ರತಿಭಟನಾಕಾರರು ತಕ್ಷಣವೇ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕೆಂದು ಪಟ್ಟು ಹಿಡಿದ ಕಾರಣ ಅವರು ಹಿಂದಿರುಗಿದರು.
ಮಂಗಳವಾರವೂ ಮುಂದುವರಿದ ಪ್ರತಿಭಟನೆಯು ಒಂದು ಹಂತದಲ್ಲಿ ಕೈಮೀರಿ ತಾಲ್ಲೂಕು ಕಚೇರಿಯ ಕಿಟಕಿಯ ಗಾಜುಗಳು ಪುಡಿಯಾದ ಘಟನೆಯೂ ನಡೆಯಿತು.
ಈ ಬಗ್ಗೆ ತಹಶೀಲ್ದಾರ್ ಮನೋರಮಾ ಪ್ರತಿಕ್ರಿಯೆ ನೀಡಿ, ‘ಎ.ಪಿ.ಎಂ.ಸಿ ಚುನಾವಣೆಯಲ್ಲಿ ತಾಲ್ಲೂಕಿನ ಮತದಾರರ ಸಂಖ್ಯೆ 36 ಸಾವಿರವಿದೆ. 2011ನೇ ಸಾಲಿನಲ್ಲಿ ಪರಿಷ್ಕರಣೆಯಾದ ಮತದಾರರ ಪಟ್ಟಿಯೇ ಇದುವರೆಗೂ ಮುಂದುವರೆದಿದೆ. ಇದುವರೆಗೂ ಎರಡು ಚುನಾವಣೆಗಳು ನಡೆದಿವೆ. ಯಾವುದೇ ದೂರುಗಳಿಲ್ಲದ ಕಾರಣ ಈ ಬಾರಿಯ ಚುನಾವಣೆಗೂ ಅದೇ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ. ಸೋಮವಾರದಿಂದ ಸುಮಾರು 387 ಮತದಾರರನ್ನು ಪಟ್ಟಿಯಿಂದ ತೆಗೆಯಲಾಗಿದೆ. ಇದುವರೆಗೂ 2011 ರಿಂದ ಆರು ಮಂದಿ ತಹಶೀಲ್ದಾರರು ತಾಲ್ಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿರುವವರು ಇದುವರೆಗೂ ಮತದಾರರ ಪಟ್ಟಿಯ ಲೋಪದೋಷಗಳನ್ನು ಸರಿಪಡಿಸಿ ಎಂದು ಇದುವರೆಗೂ ಅರ್ಜಿಯನ್ನು ತಾಲ್ಲೂಕು ಕಚೇರಿಗೆ ಸಲ್ಲಿಸಿಲ್ಲ’ ಎಂದು ತಿಳಿಸಿದರು.
- Advertisement -
- Advertisement -
- Advertisement -