ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರಿಂದ ಅಪಘಾತಕ್ಕೆ ಗುರಿಯಾದವರು ಹಾಗೂ ಪ್ರಸವ ವೇದನೆಯ ಸಮಯದಲ್ಲಿರುವ ಗರ್ಭೀಣಿ ಮಹಿಳೆಯರ ಜೀವವುಳಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ಎಂ.ರಾಜಣ್ಣ ಅಭಿಮಾನಿಗಳ ಸಂಘದಿಂದ ಶುಕ್ರವಾರ ಶಾಸಕ ಎಂ.ರಾಜಣ್ಣ ಅವರ ೫೪ ನೇ ವರ್ಷದ ಜನ್ಮದಿನದ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೆ ಮುಂದುವರೆದರೂ ಪ್ರಕೃತಿದತ್ತವಾಗಿ ಮಾನವನ ಶರೀರದಲ್ಲಿ ಉತ್ಪತ್ತಿಯಾಗುವಂತಹ ರಕ್ತವನ್ನು ವೈಜ್ಞಾನಿಕವಾಗಿ ತಯಾರಿಸಲು ಸಾಧ್ಯವಾಗುವುದಿಲ್ಲ, ಅದರಲ್ಲೂ ಮಾನವನ ರಕ್ತವನ್ನು ಹೊರತು ಬೇರೆ ಯಾವುದೇ ಜೀವಿಗಳ ರಕ್ತವನ್ನು ಒಬ್ಬರಿಂದ ಮತ್ತೊಬ್ಬರಿಗೆ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಶ್ರೇಷ್ಠವಾಗಿರುವ ಮಾನವನ ರಕ್ತವನ್ನು ಒಬ್ಬರಿಂದ ಮತ್ತೊಬ್ಬರಿಗೆ ದಾನವಾಗಿ ನೀಡಿದಾಗ, ಮತ್ತೊಬ್ಬರ ಜೀವವನ್ನು ಉಳಿಸಲು ಸಹಕಾರಿಯಾಗುತ್ತದೆ, ಈ ಹಿನ್ನೆಲೆಯಲ್ಲಿ ಆರೋಗ್ಯವಂತ ವ್ಯಕ್ತಿಗಳು, ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ದೇಹದಲ್ಲಿಯೂ ಉತ್ತಮವಾದ ರಕ್ತ ಉತ್ಪತ್ತಿಯಾಗುತ್ತದೆ ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ಮೂರ್ತಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಿ ರಕ್ತವನ್ನು ದಾನ ಮಾಡುವುದರಿಂದ ಸಮಾಜದಲ್ಲಿನ ಮುಂದಿನ ಪೀಳಿಗೆಗೆ ಉತ್ತಮವಾದ ಸಂದೇಶವನ್ನು ರವಾನಿಸಲು ಸಹಕಾರಿಯಾತ್ತದೆ. ಯಾವುದೇ ನಾಯಕರುಗಳು, ಅಥವಾ ಸಮಾಜದಲ್ಲಿನ ಗಣ್ಯವ್ಯಕ್ತಿಗಳ ಹುಟ್ಟುಹಬ್ಬಗಳ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಉಪಯುಕ್ತವಾಗಲಿದೆ ಎಂದರು.
ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಸರ್ಕಾರಿ ಅಧಿಕಾರಿಗಳು ಶಾಸಕ ರಾಜಣ್ಣ ಅವರನ್ನು ಅಭಿನಂದಿಸಿದರು. ರಕ್ತದಾನ ಶಿಬಿರದಲ್ಲಿ 50 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ರೆಡ್ಕ್ರಾಸ್ ಸಂಸ್ಥೆಯ ವತಿಯಿಂದ ಮೈಸೂರು ಪೇಟವನ್ನಿಟ್ಟು ಶಾಲು ಹೊದಿಸಿ ಶಾಸಕ ಎಂ.ರಾಜಣ್ಣ ಅವರನ್ನು ಸನ್ಮಾನಿಸಲಾಯಿತು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ನಗರಸಭಾ ಸದಸ್ಯರಾದ ಅಪ್ಸರ್ಪಾಷಾ, ವೆಂಕಟಸ್ವಾಮಿ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ತಾಲ್ಲೂಕು ಪಂಚಾಯತಿ ಸದಸ್ಯ ಮಳ್ಳೂರು ಮುನಿಯಪ್ಪ, ಯೂಸುಫ್, ನರಸಿಂಹಮೂರ್ತಿ, ಎಸ್.ಎಂ.ರಮೇಶ್, ಕನಕಪ್ರಸಾದ್, ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಅನಂತಕೃಷ್ಣ, ರಾಜಸ್ವನಿರೀಕ್ಷಕ ಸುಭ್ರಮಣಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -