ಸ್ವಿಟ್ಜರ್ ಲ್ಯಾಂಡ್ ದೇಶದಲ್ಲಿ ರೇಷ್ಮೆ ಬೆಳೆಯನ್ನು ಬೆಳೆಯಲು ಉದ್ದೇಶಿಸಿದ್ದು, ಅದರ ಸಂಬಂಧವಾಗಿ ಭಾರತದ ಕೇಂದ್ರೀಯ ರೇಷ್ಮೆ ಮಂಡಳಿಯ ಸಹಕಾರ ಪಡೆದು ರೇಷ್ಮೆಯ ವಿವಿಧ ಹಂತಗಳ ಅಧ್ಯಯನವನ್ನು ಕೈಗೊಂಡಿರುವುದಾಗಿ ಸ್ವಿಟ್ಜರ್ ಲ್ಯಾಂಡ್‌ನ ಜಾನುವಾರುಗಳ ಅಭಿವೃದ್ಧಿ ಸಂಸ್ಥೆಯ ಸಲಹೆಗಾರ ಫ್ರಿಟ್ಜ್ ಶ್ನೀಡರ್ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ಅವರ ಚಾಕಿ ಕೇಂದ್ರಕ್ಕೆ ಮಂಗಳವಾರ ತಮ್ಮ ತಂಡದೊಡನೆ ಭೇಟಿ ನೀಡಿದ್ದ ಅವರು ಮಾತನಾಡಿದರು.
ಜಿಕೆವಿಕೆಯ ಪ್ರೊ.ಚಂದ್ರಶೇಖರ್ ಗೌಡ ಅವರೊಂದಿಗೆ ಶಿಡ್ಲಘಟ್ಟ ಮತ್ತು ರಾಮನಗರ ತಾಲ್ಲೂಕಿನಲ್ಲಿ ರೇಷ್ಮೆಯ ಬೆಳೆಯುವ ಬಗ್ಗೆ ಕ್ಷೇತ್ರದರ್ಶನ ಮಾಡಿ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಇಂಡೋ ಸ್ವಿಜ್ ಜಂಟಿಯಾಗಿ ರೇಷ್ಮೆ ಬೆಳೆಯುವ ಕೆಲಸವನ್ನು ಸ್ವಿಟ್ಜರ್ ಲ್ಯಾಂಡ್ ದೇಶದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಉದ್ದೇಶವಿದೆ. ಸ್ವಿಟ್ಜರ್ ಲ್ಯಾಂಡ್‌ನಲ್ಲಿ –10 ರಿಂದ 30 ಡಿಗ್ರಿಯವರೆಗೆ ತಾಪಮಾನ ವೈಪರೀತ್ಯವಿದೆ. ಆ ದೃಷ್ಟಿಯಿಂದಲೂ ಅಧ್ಯಯನ ಮಾಡುತ್ತಿದ್ದೇವೆ. ಭಾರತದ ತಮಿಳುನಾಡು, ಕೇರಳ , ಆಂದ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕೇಂದ್ರೀಯ ರೇಷ್ಮೆ ಮಂಡಳಿಯ ಸಹಕಾರ ಪಡೆದು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ವಿವರಿಸಿದರು.
ಸ್ವಿಟ್ಜರ್ ಲ್ಯಾಂಡ್ ದೇಶದಲ್ಲಿ ಈಗಾಗಲೇ ಸ್ವಲ್ಪಮಟ್ಟಿಗಿನ ರೇಷ್ಮೆ ಉತ್ಪಾದನೆಯಿದ್ದು, ಭಾರತದ ಸಹಕಾರದೊಂದಿಗೆ ಅದನ್ನು ಅಭಿವೃದ್ಧಿಗೊಳಿಸುವ ಯೋಜನೆಯಿದೆ ಎಂದು ಅವರು ಹೇಳಿದರು.
ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ಅವರ ಚಾಕಿ ಕೇಂದ್ರ, ಹಿಪ್ಪುನೇರಳೆ ತೋಟ, ರೇಷ್ಮೆ ಹುಳು ಸಾಕಾಣಿಕಾ ಮನೆ, ಬೋದಗೂರು ಕೆ.ಆಂಜಿನಪ್ಪ ಅವರ ರೇಷ್ಮೆ ಬಿತ್ತನೆ ಕೋಠಿ, ನಗರದ ಬೈಪಾಸ್ ರಸ್ತೆಯಲ್ಲಿರುವ ನಾರಾಯಣಪ್ಪ ಅವರ ರೇಷ್ಮೆ ನೂಲು ಬಿಚ್ಚಾಣಿಕಾ ಕೇಂದ್ರ, ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ವೀಕ್ಷಿಸಿ ವಿವರಗಳನ್ನು ಪಡೆದು ಚಿಂತಾಮಣಿಯ ರೇಷ್ಮೆ ಕಾಲೇಜಿನಲ್ಲಿ ನಡೆಯುವ ರೇಷ್ಮೆ ಉಪ ಉತ್ಪನ್ನಗಳ ತಯಾರಿಕೆಯ ವೀಕ್ಷಣೆಗೆ ತೆರಳಿದರು.
ಜಿಲ್ಲಾ ಪಂಚಾಯಿತಿ ರೇಷ್ಮೆ ಉಪನಿರ್ದೇಶಕ ಬಿ.ಆರ್.ನಾಗಭೂಷಣ್, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ರಾಮ್‌ಕುಮಾರ್, ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಶ್ರೀನಿವಾಸ್, ಎಪಿಎಂಸಿ ಸದಸ್ಯ ಎಸ್.ವೆಂಕಟೇಶ್, ವಿಶ್ವನಾಥ್, ಗೋಪಾಲಗೌಡ, ಕ್ಯಾತಪ್ಪ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -