ಯುವ ಕ್ರೀಡಾಸಕ್ತರಿಗೆ ಸದಾ ಪ್ರೋತ್ಸಾಹಿಸುತ್ತಾ ಕ್ರೀಡಾಂಗಣದ ಅಭಿವೃದ್ಧಿಯ ಬಗ್ಗೆ ತುಡಿತವನ್ನಿಟ್ಟುಕೊಂಡಿದ್ದ ಕೆ.ಎಲ್.ನಾಗರಾಜ್ ಅವರ ಅಕಾಲಿಕ ನಿಧನದಿಂದಾಗಿ ಕ್ರೀಡಾಪಟುಗಳಿಗೆ ಅಪಾರ ನಷ್ಟವಾಗಿದೆ ಎಂದು ಹಿರಿಯ ಕ್ರೀಡಾಪಟು ಟಿ.ಟಿ.ನರಸಿಂಹಪ್ಪ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಮುಂಜಾನೆ ಕ್ರೀಡಾಪಟುಗಳು ಆಯೋಜಿಸಿದ್ದ ಕೆ.ಎಲ್.ನಾಗರಾಜ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಷಟಲ್‌ಕಾಕ್ ಕ್ರೀಡೆಯಲ್ಲಿ ಹಿರಿಯರ ವಿಭಾಗದಲ್ಲಿ ಜಿಲ್ಲಾ ಚಾಂಪಿಯನ್ ಆಗಿದ್ದ ಕೆ.ಎಲ್.ನಾಗರಾಜ್ ಯುವಕ್ರೀಡಾಕಾರರಿಗೆ ಸ್ಫೂರ್ತಿಯಾಗಿದ್ದರು. ಪ್ರತಿದಿನ ಚಿಕ್ಕಬಳ್ಳಾಪುರದ ಕ್ರೀಡಾಂಗಣದಲ್ಲಿ ಷಟಲ್‌ಕಾಕ್ ಆಡಿಬರುತ್ತಿದ್ದ ಅವರು ನಮ್ಮ ಶಿಡ್ಲಘಟ್ಟದಲ್ಲಿಯೇ ಒಂದು ಒಳಾಂಗಣ ಷಟಲ್‌ಕಾಕ್ ಕೋರ್ಟನ್ನು ಮಾಡಬೇಕೆಂದು ಒತ್ತಾಯಿಸುತ್ತಿದ್ದರು. ಯುವಕರು ನಾಚುವಂತೆ ಆಟವನ್ನು ಆಡುತ್ತಿದ್ದ ಅವರು ಚೆನ್ನಾಗಿ ಆಟ ಆಡುವ ಮಕ್ಕಳಿಗೆ ತಿಂಡಿ ತಿನಿಸನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು ಎಂದು ಹೇಳಿದರು.
ಕ್ರೀಡಾಪಟುಗಳು ಮೌನಾಚರಣೆಯ ಮೂಲಕ ಕೆ.ಎಲ್.ನಾಗರಾಜ್ ಅವರ ಶ್ರದ್ಧಾಂಜಲಿ ಅರ್ಪಿಸಿದರು.
ರಾಷ್ಟ್ರೀಯ ಅಥ್ಲೀಟ್ ದ್ಯಾವಪ್ಪನಗುಡಿ ನಾರಾಯಣಸ್ವಾಮಿ, ರಾಷ್ಟ್ರೀಯ ಕ್ರೀಡಾಪಟು ಜಯಚಂದ್ರ, ಮಾಜಿ ಪುರಸಭಾ ಸದಸ್ಯ ಜೆ.ವಿ.ಸುರೇಶ್, ಜಗದೀಶ್, ಮುರಳಿ, ಆರ್.ಶ್ರೀನಿವಾಸ್, ವಸಂತಕುಮಾರ್, ದಾಕ್ಷಾಯಿಣಿ, ಕರಾಟೆ ಶಿಕ್ಷಕ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -