16ನೇ ಶತಮಾನದ ಅಪರೂಪದ ಶಾಸನ ಪತ್ತೆ; ಭಾಗವತ ಮಾನ್ಯದ ಮಾಹಿತಿ ಬೆಳಕಿಗೆ

- Advertisement -
- Advertisement -

Sidlaghatta : ತಾಲ್ಲೂಕಿನ ಮಲ್ಲಿಶೆಟ್ಟಿಪುರ ಗ್ರಾಮದಲ್ಲಿ 16ನೇ ಶತಮಾನಕ್ಕೆ ಸೇರಿದ ಅಪರೂಪದ ಶಾಸನವೊಂದು ಪತ್ತೆಯಾಗಿದ್ದು, ವಿಜಯನಗರ ಕಾಲದ ಧಾರ್ಮಿಕ ದಾನಪರಂಪರೆ ಮತ್ತು ಭಾಗವತ ಸಂಪ್ರದಾಯದ ಕುರಿತು ಮಹತ್ವದ ಮಾಹಿತಿಯನ್ನು ಅದು ತಿಳಿಸುತ್ತದೆ.

ಮಲ್ಲಿಶೆಟ್ಟಿಪುರಕ್ಕೆ ಮಂಗಳವಾರ ಭೇಟಿ ನೀಡಿದ್ದ ಶಾಸನತಜ್ಞರಾದ ಕೆ.ಆರ್.ನರಸಿಂಹನ್, ಕೆ.ಧನಪಾಲ್. ಎ.ಎಂ.ತ್ಯಾಗರಾಜ್ ಮತ್ತು ಯುವರಾಜ್ ಶಾಸನವನ್ನು ಓದಿ ಅದರಲ್ಲಿನ ಸಂಗತಿಗಳನ್ನು ವಿವರಿಸಿದರು.

“ಮಲ್ಲಿಶೆಟ್ಟಿಪುರವು 10ನೇ ಶತಮಾನದಿಂದಲೂ ಅಸ್ತಿತ್ವದಲ್ಲಿದ್ದ ಪ್ರಾಚೀನ ಗ್ರಾಮವೆಂದು ಇಲ್ಲಿ ಸಿಕ್ಕಿರುವ ಶಾಸನಗಳ ಆಧಾರದ ಮೇಲೆ ಪರಿಗಣಿಸಬಹುದಾದೆ. ಇಲ್ಲಿ ಈಗಾಗಲೇ ದಾಖಲಾಗಿದ್ದ ವೀರಗಲ್ಲು ಶಾಸನಗಳ ಜೊತೆಗೆ ಹೊಸ ಶಾಸನ ಪತ್ತೆಯಾಗಿದ್ದು, ಆ ಶಾಸನವು 16ನೇ ಶತಮಾನದ ಕನ್ನಡ ಲಿಪಿಯಲ್ಲಿ ತೆಲುಗು ಭಾಷೆಯಲ್ಲಿ ಕೆತ್ತಲ್ಪಟ್ಟಿದ್ದು, ಎಂಟು ಸಾಲುಗಳನ್ನು ಒಳಗೊಂಡಿದೆ. ಈ ಶಾಸನವು ಗ್ರಾಮದ ಗೋಕುಂಟೆ ಸಮೀಪ ಪತ್ತೆಯಾಗಿದೆ” ಎಂದು ಅವರು ಹೇಳಿದರು.

“ಶಾಸನವು ಶಕ 1506ರ ಸ್ವಭಾನು ಸಂವತ್ಸರಕ್ಕೆ ಸೇರಿದ್ದು, ಕ್ರಿ.ಶ. 1584ರ ಫೆಬ್ರುವರಿ 17ರ ದಿನಾಂಕವನ್ನು ಉಲ್ಲೇಖಿಸುತ್ತದೆ. ಶಾಸನದಲ್ಲಿ ಆಳ್ವಿಕೆ ನಡೆಸುತ್ತಿದ್ದ ರಾಜನ ಹೆಸರಿಲ್ಲದಿದ್ದರೂ, ಸಾನಿ ಚಿನ್ನಪ್ಪನಾಯಕನ ಪುತ್ರ ಕೃಷ್ಣಪ್ಪನಾಯಕನ ಹೆಸರನ್ನು ದಾಖಲಿಸಲಾಗಿದೆ. ಕೃಷ್ಣಪ್ಪನು ನೆಲ್ಲಕಂಟಿ ತಿರುಮಲಯ್ಯ ಎಂಬುವವರಿಗೆ ಆಲಂಬಗಿರಿಯ ವೆಂಕಟಾದ್ರಿ ದೇವರ ಪುಣ್ಯಾರ್ಥವಾಗಿ ಹೊಲವೊಂದನ್ನು “ಭಾಗವತ ಮಾನ್ಯ”ವಾಗಿ ಧಾರಾಪೂರ್ವಕವಾಗಿ ದಾನ ನೀಡಿರುವುದಾಗಿ ಶಾಸನ ತಿಳಿಸುತ್ತದೆ”.

“ಶಾಸನದಲ್ಲಿ ಉಲ್ಲೇಖವಾಗಿರುವ ಆಲಂಬಗಿರಿ, ಚಿಂತಾಮಣಿ ಸಮೀಪದ ಐತಿಹಾಸಿಕ ವೈಷ್ಣವ ಕ್ಷೇತ್ರವಾಗಿದೆ. ಅಲ್ಲಿನ ವೆಂಕಟೇಶ್ವರಸ್ವಾಮಿಗೆ ವಿಜಯನಗರ ಅರಸರಾದ ಕೃಷ್ಣದೇವರಾಯ, ಅಚ್ಯುತರಾಯ ಹಾಗೂ ನಂತರದ ಮರಾಠ ಆಡಳಿತಗಾರ ಸಾಂಭಾಜಿ ಕಾಲದಲ್ಲಿಯೂ ದಾನಗಳು ಸಲ್ಲಿಕೆಯಾಗಿರುವುದು ಇತರ ಶಾಸನಗಳಿಂದ ತಿಳಿದುಬಂದಿದೆ”.

“ಈ ಶಾಸನದಲ್ಲಿ ಉಲ್ಲೇಖವಾಗಿರುವ ಸಾನಿ ಚಿನ್ನಪ್ಪನಾಯಕನ ಹೆಸರು ಆಲಂಬಗಿರಿಯ ವೆಂಕಟರಮಣ ದೇವಾಲಯದ ಕ್ರಿ.ಶ. 1533ರ ಶಾಸನದಲ್ಲಿಯೂ ಕಂಡುಬರುತ್ತದೆ. ಅಚ್ಯುತರಾಯನ ಆಳ್ವಿಕೆಯ ಆ ಶಾಸನದ ಪ್ರಕಾರ, ಚಿನ್ನಪ್ಪನಾಯಕನು ಸಾನಿ ಪದುಮಪ್ಪನಾಯಕನ ಪುತ್ರನಾಗಿದ್ದು, ದೇವಾಲಯಕ್ಕೆ ದಾನದತ್ತಿಗಳನ್ನು ನೀಡಿದ್ದನು. ತಂದೆಯ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿದ ಕೃಷ್ಣಪ್ಪನು ಕೂಡ ಭಾಗವತ ಮಾನ್ಯ ರೂಪದಲ್ಲಿ ಹೊಲವನ್ನು ದಾನ ನೀಡಿರುವುದು ಈ ಹೊಸ ಶಾಸನದಿಂದ ದೃಢಪಟ್ಟಿದೆ” ಎಂದು ಶಾಸನತಜ್ಞರು ಹೇಳಿದರು.

ಇತಿಹಾಸಕಾರರ ಪ್ರಕಾರ, ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ವೈಷ್ಣವ ಮತ್ತು ಶ್ರೀವೈಷ್ಣವ ಸಂಪ್ರದಾಯಗಳು ವ್ಯಾಪಕವಾಗಿ ಬೆಳೆದು ಅನೇಕ ದೇವಾಲಯಗಳು ನಿರ್ಮಾಣಗೊಂಡಿದ್ದವು. ಅವುಗಳ ನಿರ್ವಹಣೆಗಾಗಿ ವಿವಿಧ ರೀತಿಯ ದಾನದತ್ತಿಗಳನ್ನು ನೀಡಲಾಗುತ್ತಿತ್ತು. ಅವುಗಳಲ್ಲಿ “ಭಾಗವತ ಮಾನ್ಯ”ವೂ ಒಂದಾಗಿದ್ದು, 16–17ನೇ ಶತಮಾನಗಳಲ್ಲಿ ದಾಸಸಾಹಿತ್ಯ ಮತ್ತು ಭಾಗವತ ಸಂಪ್ರದಾಯದ ವಿಸ್ತರಣೆಗೆ ಇಂತಹ ದಾನಗಳು ಮಹತ್ವದ ಪಾತ್ರ ವಹಿಸಿದ್ದವು. ಮಲ್ಲಿಶೆಟ್ಟಿಪುರದಲ್ಲಿ ಪತ್ತೆಯಾದ ಈ ಶಾಸನವು ಆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಮತ್ತೊಂದು ಮಹತ್ವದ ಸಾಕ್ಷಿಯಾಗಿದೆ.

In English: A rare 16th-century stone inscription has been discovered near the Gokunte pond at Mallishettipura village in Sidlaghatta taluk. Epigraphists K.R. Narasimhan, K. Dhanapal, A.M. Thyagaraj and Yuvaraj read the eight-line record, carved in Kannada script but Telugu language, dated February 17, 1584 CE (Shaka 1506, Swabhanu samvatsara). It records Krishnappa Nayaka, son of Sani Chinnappa Nayaka, granting a field as a “Bhagavata Manya” endowment to Nellakanti Tirumalayya for the merit of Lord Venkatadri of Alambagiri, a historic Vaishnava centre near Chintamani — fresh evidence of Vijayanagara-era religious donation traditions in the region.

FAQ

ಶಾಸನದಲ್ಲಿ ಏನಿದೆ? ಕ್ರಿ.ಶ. 1584ರ ಫೆಬ್ರುವರಿ 17ರ ದಿನಾಂಕದ ಈ ಶಾಸನವು, ಸಾನಿ ಚಿನ್ನಪ್ಪನಾಯಕನ ಪುತ್ರ ಕೃಷ್ಣಪ್ಪನಾಯಕನು ಆಲಂಬಗಿರಿಯ ವೆಂಕಟಾದ್ರಿ ದೇವರ ಪುಣ್ಯಾರ್ಥವಾಗಿ ನೆಲ್ಲಕಂಟಿ ತಿರುಮಲಯ್ಯ ಅವರಿಗೆ ಹೊಲವೊಂದನ್ನು “ಭಾಗವತ ಮಾನ್ಯ”ವಾಗಿ ದಾನ ನೀಡಿದ ವಿವರವನ್ನು ದಾಖಲಿಸುತ್ತದೆ.

ಶಾಸನ ಎಲ್ಲಿ, ಯಾವ ಭಾಷೆಯಲ್ಲಿ ಇದೆ? ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರ ಗ್ರಾಮದ ಗೋಕುಂಟೆ ಸಮೀಪ ಪತ್ತೆಯಾಗಿದ್ದು, 16ನೇ ಶತಮಾನದ ಕನ್ನಡ ಲಿಪಿಯಲ್ಲಿ ತೆಲುಗು ಭಾಷೆಯಲ್ಲಿ ಕೆತ್ತಲಾದ ಎಂಟು ಸಾಲುಗಳನ್ನು ಒಳಗೊಂಡಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!