Home News ಡಾ.ಬಿ.ಆರ್.ಅಂಬೇಡ್ಕರ್ ರ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಪ್ರತಿಭಟನೆ

ಡಾ.ಬಿ.ಆರ್.ಅಂಬೇಡ್ಕರ್ ರ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಪ್ರತಿಭಟನೆ

0
B R Ambedkar Defacing Protest

ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಮುಂಭಾಗ ಕದಸಂಸ ಪದಾಧಿಕಾರಿಗಳು ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿದರು.

ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯಿಂದ ದೇಶದ ಸಂವಿಧಾನ ಹಾಗೂ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ರ ಭಾವಚಿತ್ರಕ್ಕೆ ಮಾಡಿರುವ ಅವಮಾನವನ್ನು ದೇಶದ್ರೋಹ ಕೃತ್ಯ ಎಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಅವರನ್ನು ಗಡೀಪಾರು ಮಾಡಬೇಕು ಎಂದು ಅವರು ಆಗ್ರಹಿಸಿದರು.

ಗಣರಾಜ್ಯೋತ್ಸವ ಅಂಗವಾಗಿ ರಾಜ್ಯದ ರಾಯಚೂರು ಜಿಲ್ಲಾ ಕೋರ್ಟ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿದ್ದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ವೃತ್ತಿ ಗೌರವ ಸೇರಿದಂತೆ ಸಂವಿಧಾನ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಿಗೆ ಅವಮಾನ ಮಾಡಿರುವುದು ಖಂಡನೀಯ. ನ್ಯಾಯಮೂರ್ತಿ ಮಲ್ಲಿಕಾರ್ಜುನಗೌಡ ಅವರಿಗೆ ಈ ದೇಶದ ಸಂವಿಧಾನದ ಬಗ್ಗೆ ಕನಿಷ್ಠ ಅರಿವು, ಸಾಮಾನ್ಯ ಜ್ಞಾನ, ಗೌರವವಿಲ್ಲ. ಹಾಗಾಗಿ ಕೂಡಲೇ ಅವರ ಕಾನೂನು ವ್ಯಾಸಂಗದ ಬಗ್ಗೆ ಸೂಕ್ತ ತನಿಖೆ ನಡೆಸುವುದು ಮತ್ತು ಅವರನ್ನು ನ್ಯಾಯಾಧೀಶ ವೃತ್ತಿಯಿಂದ ವಜಾ ಮಾಡುವುದು ಸೇರಿದಂತೆ ಸಂವಿಧಾನ ಹಾಗೂ ಕಾನೂನು ಸುವ್ಯವಸ್ಥೆಗೆ ಅವಮಾನ ಮಾಡಿರುವ ಈತನ ವಿರುದ್ದ ದೇಶದ್ರೋಹ ಆರೋಪದಡಿ ಪ್ರಕರಣ ದಾಖಲಿಸಿ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ತಹಶೀಲ್ದಾರ್ ಬಿ.ಎಸ್.ರಾಜೀವ್ ಮುಖಾಂತರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್, ತಾಲ್ಲೂಕು ಸಂಚಾಲಕ ಮುನಿಆಂಜಿನಪ್ಪ, ತಾಲ್ಲೂಕು ಸಂಘಟನಾ ಸಂಚಾಲಕರಾದ ತೊಟ್ಟಗಾನಹಳ್ಳಿ ದ್ಯಾವಪ್ಪ, ಹಿತ್ತಲಹಳ್ಳಿ ದೇವರಾಜ್, ದಿಬ್ಬೂರಹಳ್ಳಿ ಗೊರ‍್ಲಪ್ಪ, ಚಿಕ್ಕನರಸಿಂಹಪ್ಪ, ಯಣ್ಣಂಗೂರು ಸುಬ್ರಮಣಿ, ಬೈರಸಂದ್ರ ದೇವರಾಜ್, ದಿಬ್ಬೂರಹಳ್ಳಿ ಲೋಕೇಶ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version