Home News ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು ಅವಮಾನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹ

ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು ಅವಮಾನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹ

0
ambedkar insult protest sidlaghatta

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರ ನಾಮಫಲಕಕ್ಕೆ ಸಗಣಿ ಎರಚುವ ಜೊತೆಗೆ ಅಂಬೇಡ್ಕರ್‌ರ ಫ್ಲೆಕ್ಸ್ ನ್ನು ಹರಿದು ಹಾಕಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಮುಖಂಡರು ಶುಕ್ರವಾರ ನಗರಠಾಣೆ ಮುಂಭಾಗ ಕೆಲ ಕಾಲ ಪ್ರತಿಭಟಿಸಿ ಡಿವೈಎಸ್‌ಪಿ ಲಕ್ಷ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಅಂಬೇಡ್ಕರ್ ನಾಮಫಲಕಕ್ಕೆ ಸಗಣಿ ಎರಚಿ ಫ್ಲೆಕ್ಸ್ ಹರಿದು ಹಾಕಿರುವುದು ಇಡೀ ಮನುಕುಲ ತಲೆತಗ್ಗಿಸುವಂತಹ ವಿಷಯವಾಗಿದೆ. ಈ ಕೃತ್ಯದಲ್ಲಿ ಪಾಲ್ಗೊಂಡ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಜಿಲ್ಲೆಯಿಂದ ಗಡೀಪಾರು ಮಾಡಬೇಕು. ಹಾಗು ಗ್ರಾಮದ ದಲಿತ ಕುಟುಂಬಗಳಿಗೆ ಸಾಮರಸ್ಯ ಜೀವನ ನಡೆಸಲು ಬೇಕಾದ ವಾತಾವರಣ ಕಲ್ಪಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಡಿವೈಎಸ್‌ಪಿ ಲಕ್ಷ್ಮಯ್ಯ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರ ಫ್ಲೆಕ್ಸ್ ಹರಿದು ಅವಮಾನ ಮಾಡಿರುವುದು ನಿಜಕ್ಕೂ ದುರದೃಷ್ಟಕರ. ಈ ಬಗ್ಗೆ ಈಗಾಗಲೇ ನಮ್ಮ ಅಧಿಕಾರಿಗಳು ಸೇರಿದಂತೆ ಸ್ವತಃ ಗ್ರಾಮಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದು ಅಗತ್ಯ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ಅವರು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದಂತೆ ತಹಸೀಲ್ದಾರ್ ನೇತೃತ್ವದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸುವ ಮೂಲಕ ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲಾಗುವುದು ಎಂದರು.

ಮನವಿ ಸಲ್ಲಿಸಿದ ನಂತರ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಇದ್ಲೂಡು ಗ್ರಾಮದ ಫ್ಲೆಕ್ಸ್ ಹರಿದು ಹಾಕಿರುವ ಸ್ಥಳದಲ್ಲಿಯೇ ಮತ್ತೊಂದು ಫ್ಲೆಕ್ಸ್ ಅಳವಡಿಸಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗ್ರಾಮದ ದಲಿತರಿಗೆ ದೈರ್ಯ ತುಂಬಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಎನ್.ಎ.ವೆಂಕಟೇಶ್, ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ಮುಖಂಡರಾದ ಚಲಪತಿ, ಈಧರೆಪ್ರಕಾಶ್, ನಾಗನರಸಿಂಹ, ಮುನಿನರಸಿಂಹ, ನಾರಾಯಣಸ್ವಾಮಿ, ತಿರುಮಲೇಶ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version