Home News ಬುಡಗವಾರಹಳ್ಳಿ ಗೋಮಾಳ ಜಮೀನು ವಿವಾದ: ರೈತರು–ಅರಣ್ಯ ಇಲಾಖೆ ನಡುವೆ ಉದ್ವಿಗ್ನತೆ

ಬುಡಗವಾರಹಳ್ಳಿ ಗೋಮಾಳ ಜಮೀನು ವಿವಾದ: ರೈತರು–ಅರಣ್ಯ ಇಲಾಖೆ ನಡುವೆ ಉದ್ವಿಗ್ನತೆ

0
Sidlaghatta Survey Forest department officers Farmers Clash

Budagavarahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬುಡಗವಾರಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗೋಮಾಳ ಜಮೀನಿನಲ್ಲಿ ಸ್ವಾಧೀನದಲ್ಲಿರುವ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲಬ್ಬಿಸುವ ಹುನ್ನಾರವನ್ನು ನಡೆಸಿದ್ದಾರೆ ಎಂದು ಆರೋಪಿಸಿ, ಗುರುವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ರೈತರ ನಡುವೆ ವಾಗ್ವಾದ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು.

ತಹಶೀಲ್ದಾರ್ ಗಗನ ಸಿಂಧು ಅವರು ಪೊಲೀಸರ ಸರ್ಪಗಾವಲಿನಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದೊಡನೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಪ್ರದೇಶಕ್ಕೆ ತೆರಳಿದ ವೇಳೆಯಲ್ಲಿ ಅಲ್ಲಿ ಸ್ವಾಧೀನದಲ್ಲಿರುವ ರೈತರು ಮತ್ತು ಮಹಿಳೆಯರು ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 50 ವರ್ಷಗಳಿಂದ ನಾವು ಸ್ವಾಧೀನದಲ್ಲಿದ್ದೇವೆ ಇದರಿಂದಾಗಿ ನಮ್ಮ ಜೀವನ ನಡೆಯುತ್ತಿದೆ ಅರಣ್ಯ ಇಲಾಖೆಯ ಅಧಿಕಾರಿಗಳು ನಮಗೆ ಗಿಡಗಳು ಕೊಟ್ಟು ತಮ್ಮ ತಮ್ಮ ತೋಟಗಳಲ್ಲಿ ಹಾಕಿಕೊಳ್ಳಿ ಎಂದು ಹೇಳಿದ್ದರಿಂದ ನಾವು ಹಾಕಿಕೊಂಡಿದ್ದೇವೆ. ಹಾಕಿರುವ ದುಡ್ಡು ಸಹ ನಮಗೆ ಕೊಟ್ಟಿಲ್ಲ. ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆಸಿದ್ದಾರೆ. ಈಗ ನಮ್ಮ ಜಮೀನು ಸರ್ವೇ ಮಾಡಲು ಬಂದಿರೋದು ಎಷ್ಟರಮಟ್ಟಿಗೆ ಸರಿ ಎಂದು ತಾಲ್ಲೂಕು ದಂಡಾಧಿಕಾರಿಗಳನ್ನು ಪ್ರಶ್ನಿಸಿದರು.

ಸರ್ಕಾರಿ ಗೋಮಾಳದಲ್ಲಿ ನಾವು ಸ್ವಾಧೀನದಲ್ಲಿದ್ದೇವೆ. ಕಾನೂನಿನ ಪ್ರಕಾರ ಸಾಗುವಳಿ ಚೀಟಿ ನೀಡಲು 51, 53, 57 ಅರ್ಜಿಗಳನ್ನು ಹಾಕಿಕೊಂಡಿದ್ದೇವೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಯಾವುದಾದರೂ ದಾಖಲೆ ಇದ್ದರೆ, ಅವರ ಹೆಸರಿನಲ್ಲಿ ಆರ್. ಟಿ. ಸಿ ಬರುತ್ತದೆ. ಆದರೆ ಪಹಣಿಯಲ್ಲಿ ಯಾವುದು ಇಲ್ಲ, ಸರ್ವೆ ಯಾಕೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ತಹಶೀಲ್ದಾರರನ್ನು ರೈತರು ಪ್ರಶ್ನಿಸಿದರು.

ತಹಶೀಲ್ದಾರ್ ಅವರು, ಯಾರು ಯಾವ ಬೆಳೆಗಳನ್ನು ಬೆಳೆದಿದ್ದಾರೆ, ಅರಣ್ಯ ಇಲಾಖೆಗಳು ಅಧಿಕಾರಿಗಳು ಗಿಡಗಳನ್ನು ನಾಟಿ ಮಾಡಿದ್ದಾರೆ ಎಂದು ಪರಿಶೀಲನೆ ನಡೆಸೋಣ ಎಂದಾಗ ಮುಂದೆ ಸಾಗಲು ಮಹಿಳೆಯರು ಮತ್ತು ರೈತರು ಅಡ್ಡ ಪಡಿಸಿದರು. ಇದೇ ವೇಳೆಯಲ್ಲಿ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆಯಿತು. ಅರಣ್ಯಾಧಿಕಾರಿಗಳನ್ನು ರೈತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಈ ಕೆಲಕಾಲ ಗೊಂದಲ ಮತ್ತು ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ತಹಶೀಲ್ದಾರ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ನಾನು ಯಾವುದೇ ಕಾರಣಕ್ಕೂ ರೈತ ವಿರೋಧಿ ನೀತಿಯನ್ನು ಅನುಸರಿಸುವುದಿಲ್ಲ. ರೈತರ ಪರವಾಗಿ ಇರ್ತೀನಿ ಎಂದು ಭರವಸೆ ನೀಡಿದ ಬಳಿಕ ಎಲ್ಲಾ ರೈತರು ಮತ್ತು ಮಹಿಳೆಯರು ಎದ್ದು ತಾವು ಸ್ವಾದೀನದಲ್ಲಿರುವ ಜಮೀನುಗಳನ್ನು ತೋರಿಸಿದರು.

ಸರ್ಕಲ್ ಇಸ್ಪೆಕ್ಟರ್ ರೈತರನ್ನು ಸಮಾಧಾನ ಮಾಡಿಸಿ ತಾಲೂಕು ದಂಡಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲು ಅನುಕೂಲ ಮಾಡಿಕೊಟ್ಟರು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಟಿ. ಕೆ. ಅರುಣ್ ಕುಮಾರ್ ಮಾತನಾಡಿ, 60 ವರ್ಷಗಳಿಂದ ರೈತರು ಇಲ್ಲಿ ಸಾಧೀನದಲ್ಲಿದ್ದಾರೆ, ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸ್ವತಃ ತಹಶೀಲ್ದಾರ್ ವೀಕ್ಷಣೆ ಮಾಡಿದ್ದಾರೆ. ಆದರೆ ಅರಣ್ಯ ಅಧಿಕಾರಿಗಳು ಕೇವಲ ಗಿಡ ನಾಟಿ ಮಾಡಲು ಅವಕಾಶ ಕೊಟ್ಟು ಜಮೀನೇ ನಮ್ಮದು ಅಂತ ಹೇಳಿಕೊಂಡು ಬಂದಿರೋದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತಿದೆ. ಯಾವುದೇ ರೀತಿ ದಾಖಲೆಗಳಿಲ್ಲದೆ ಕೇವಲ ಗಿಡಗಳನ್ನು ಮುಂದೆ ಇಟ್ಕೊಂಡು ರೈತರನ್ನು ಒಕ್ಕಲುಬ್ಬಿಸುವ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಗೋಮಾಳ ಜಮೀನು ರೈತರಿಗೆ ಹಸ್ತಾಂತರ ಮಾಡುವ ಅಥವಾ ಮಂಜೂರು ಮಾಡುವ ಹಕ್ಕನ್ನು ತಹಶೀಲ್ದಾರ್ ಹೊಂದಿರುತ್ತಾರೆ. ಅದು ಹೊರತು ಪಡಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ಮಾಡಲು ಅಧಿಕಾರವೇನು ಎಂದು ಪ್ರಶ್ನಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಬಳಿ ಏನಾದರೂ ದಾಖಲೆ ಇದ್ರೆ ತೋರಿಸಿರಿ. ಅದನ್ನು ಆಧಾರವಾಗಿಟ್ಟುಕೊಂಡು ಸರ್ವೇ ಮಾಡಲಿ. ನಮ್ಮದೇನು ಅಭ್ಯಂತರವಿಲ್ಲ ಎಂದು ರೈತ ಮುಖಂಡರು ತಹಶೀಲ್ದಾರ್ ಅವರಿಗೆ ಹೇಳಿದರು.

ಸರ್ಕಲ್ ಇನ್ಸ್ಪೆಕ್ಟರ್ ಎಂ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಶ್ಯಾಮಲಾ, ವೇಣುಗೋಪಾಲ್ ಮತ್ತು ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಭಾಗಿಯ ಉಪಾಧ್ಯಕ್ಷ ಲಕ್ಷ್ಮಿ ನಾರಾಯಣ ರೆಡ್ಡಿ, ಜಿಲ್ಲಾಧ್ಯಕ್ಷ ಟಿ.ಕೆ. ಅರುಣ್ ಕುಮಾರ್, ಕಾರ್ಯದರ್ಶಿ ಮಾರುತಿ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಬಾಬು, ಜಿಲ್ಲಾ ಸಂಚಾಲಕ ರೆಡ್ಡಪ್ಪ, ಈಶ್ವರ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಾಂಜಿನಪ್ಪ, ಪೆದ್ದಪಯ್ಯ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಬಾಗೇಪಲ್ಲಿ ತಾಲ್ಲೂಕು ಅಧ್ಯಕ್ಷ ಈಶ್ವರೆಡ್ಡಿ, ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಯರಪ್ಪ, ನಕ್ಕಲಹಳ್ಳಿ , ಬುಡಗವಾರಹಳ್ಳಿ, ದಾಸಾರ್ಲಹಳ್ಳಿ ಗ್ರಾಮಗಳ ರೈತರು ಹಾಗೂ ರೈತ ಮುಖಂಡರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version