ತಾಲ್ಲೂಕಿನ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಸೋಮವಾರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನವನ್ನು ವಿತರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು ಈ ಸಂಕಷ್ಟದ ಕಾಲದಲ್ಲಿ ತಲಾ ಮೂರು ಸಾವಿರ ರೂಗಳನ್ನು ನೀಡಿದ್ದಾರೆ. ಆ ಒಟ್ಟು ಹಣದಲ್ಲಿ ತಾಲ್ಲೂಕಿನ 179 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಕ ರೂಪವಾಗಿ ತಲಾ 3000 ರೂಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾದದ್ದು. ಕೊರೊನಾ ಎದುರಿಸಲು ನೀವು ಪಡುವ ಪರಿಶ್ರಮಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಕ್ಷೇತ್ರ ಮಟ್ಟದ ಆರೋಗ್ಯ ಸಹಾಯಕಿಯರು ಮುವ್ವತ್ತು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೂ ಪ್ರೋತ್ಸಾಹ ಧನವನ್ನು ಕೊಡಿ ಎಂದು ವಿನಂತಿಸಿದರು.
ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್, ಉಪನಿರ್ದೇಶಕ ಚಂದ್ರ ಶೇಖರ್, ಚಂದ್ರೆಗೌಡ, ಗೋವಿಂದರಾಜು, ಉಮೇಶ್ ರೆಡ್ಡಿ, ಜಯಚಂದ್ರ, ಮಂಜುನಾಥ್, ಗೀತ, ಮುನಿರತ್ನಮ್ಮ ಹಾಜರಿದ್ದರು.