Sidlaghatta, Chikkaballapur District : ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರ ಮೇಲಿನ ಚಪ್ಪಲಿ ಎಸೆಯುವ ಘಟನೆ ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯ ಗೌರವಕ್ಕೆ ಧಕ್ಕೆ ತರುವಂತದ್ದು ಎಂದು ಶಿಡ್ಲಘಟ್ಟದ ವಕೀಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೃತ್ಯವನ್ನು ಅವರು ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲಿನ ನೇರ ದಾಳಿ ಎಂದು ಖಂಡಿಸಿದ್ದಾರೆ.
ಬುಧವಾರ ನಗರದ ತಾಲ್ಲೂಕು ನ್ಯಾಯಾಲಯದಲ್ಲಿ ಕಲಾಪದಿಂದ ಹೊರಗುಳಿದ ವಕೀಲರು, ತಾಲ್ಲೂಕು ವಕೀಲರ ಸಂಘದ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ, ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ ಮಾತನಾಡಿ, “ಮುಖ್ಯ ನ್ಯಾಯಮೂರ್ತಿಯವರ ಮೇಲೆ ಚಪ್ಪಲಿ ಎಸೆದ ವಕೀಲ ರಾಜೇಶ್ ಕಿಶೋರ್ ಎಂಬಾತನನ್ನು ಬಂಧಿಸಿ ದೇಶದ್ರೋಹಿಯೆಂದು ಘೋಷಿಸಬೇಕು. ಇಂತಹ ಕೃತ್ಯಗಳು ಭಾರತದ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ವ್ಯವಸ್ಥೆಯ ಶ್ರೇಷ್ಟತೆಯನ್ನು ಅವಮಾನಪಡಿಸುತ್ತವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಸಿ. ಜಿ. ಭಾಸ್ಕರ್ ಅವರು, “ಈ ಘಟನೆ ಕೇವಲ ವ್ಯಕ್ತಿಯ ಮೇಲಿನ ದಾಳಿ ಅಲ್ಲ, ಇದು ಭಾರತದ ಸಂವಿಧಾನ ಮತ್ತು ನ್ಯಾಯಾಂಗದ ಗೌರವದ ಮೇಲಿನ ನೇರ ಹಲ್ಲೆ. ಇಂತಹ ಕ್ರಿಯೆಗಳು ಪ್ರಜಾಪ್ರಭುತ್ವದ ಮೂಲ ಆಧಾರವನ್ನೇ ಕುಸಿಸುತ್ತವೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರಾದ ಎಂ. ಪಾಪಿರೆಡ್ಡಿ, ಡಿ. ಅಶ್ವತ್ಥನಾರಾಯಣ್, ನಾಗರಾಜ್, ವಿಶ್ವನಾಥ್, ಕೃಷ್ಣಮೂರ್ತಿ, ಶಿವಕುಮಾರ್, ಕೆ.ಎಂ.ಏಗೌಡ, ರಾಮಕೃಷ್ಣ, ರಾಘವೇಂದ್ರ, ಮಂಜುನಾಥ್ ಸೇರಿದಂತೆ ಅನೇಕರು ಹಾಜರಿದ್ದರು.