Sidlaghatta : ಅಯೋಧ್ಯ ವೈಶ್ಯ ನಾಮಧಾರಿ ನಗರ್ತ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ವಿತರಣೆ ಮಾಡಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಈ ಮೊದಲಿನಿಂದಲೂ ಮನವಿ ನೀಡುವುದು, ಹೋರಾಟ ಮಾಡಿಕೊಂಡಲೇ ಬರಲಾಗುತ್ತಿದೆ ಹೊರತು, ಸ್ಪಂದನೆ ಸಿಗುತ್ತಿಲ್ಲ ಎಂದು ಸಮುದಾಯದ ಮುಖಂಡ ಬ್ಯಾಟರಾಯಶೆಟ್ಟಿ ಅಸಮಾಧಾನ ಹೊರ ಹಾಕಿದರು.
ಅಯೋಧ್ಯ ವೈಶ್ಯ ನಾಮಧಾರಿ ನಗರ್ತ ಸಮುದಾಯಕ್ಕೆ ಅಧಿಕೃತ ಮಾನ್ಯತೆ ನೀಡಿ ಜಾತಿ ಪ್ರಮಾಣ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ, ಸಮುದಾಯದ ಮುಖಂಡರೊಂದಿಗೆ ಗ್ರೇಡ್ 2 ತಹಶೀಲ್ದಾರ್ ಕೆ.ಎನ್.ಎಂ.ಮಂಜುನಾಥ್ ಅವರಿಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದರು.
ನಗರ್ತ, ನಾಮಧಾರಿ ನಗರ್ತ, ನಾಮಧಾರಿ ಎಂಬ ಹೆಸರಿನಲ್ಲಿ ಹಲವು ದಶಕಗಳಿಂದ ಶಾಲಾ ದಾಖಲೆ, ಆದಾಯ ದಾಖಲೆಗಳಲ್ಲಿ ಸೇರಿದಂತೆ ವಿವಿಧ ದಾಖಲೆಗಳಲ್ಲಿ ನಮೂದು ಇದೆ. ಈ ಹೆಸರುಗಳಲ್ಲಿ ಇರುವ ವ್ಯತ್ಯಾಸಗಳಿಂದ ಇತ್ತೀಚಿನ ದಿನದಲ್ಲಿ ಗೊಂದಲ ಸೃಷ್ಟಿಯಾಗಿದೆ. ಎಲ್ಲಾ ಹೆಸರುಗಳು ಒಂದೇ ಸಮುದಾಯವನ್ನು ಸೂಚಿಸುತ್ತವೆ. ವರ್ಗದವರ ಜಾತಿಯನ್ನು ಅಧಿಕೃತ ಗೆಜೆಟ್ ಪಟ್ಟಿಯಲ್ಲಿ ಸರ್ಕಾರ ಸೇರಿಸದಿರುವುದರಿಂದ ಪ್ರಮಾಣಪತ್ರ ಪಡೆದುಕೊಳ್ಳಲು ಕಷ್ಟವಾಗುತ್ತಿದೆ ಎಂದರು.
ನೆರೆಯ ಆಂಧ್ರಪ್ರದೇಶ ಹಾಗು ತಮಿಳುನಾಡಿನಲ್ಲಿ ಸಮುದಾಯದವರು 2 ಎ ವರ್ಗದಲ್ಲಿ ಮಾನ್ಯತೆ ಪಡೆದು ಸರ್ಕಾರದ ಸವಲತ್ತು ಪಡೆಯುತ್ತಿದ್ದಾರೆ. ರಾಜ್ಯಾದ್ಯಂತ ಸುಮಾರು 2 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯದವರು ಜಾತಿ ಪ್ರಮಾಣ ಪತ್ರ ಸಿಗದೇ ಪರದಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ನಮಗೆ ಸವಲತ್ತು ಕಲ್ಪಿಸಲು ವಿಳಂಭ ಧೋರಣೆ ಯಾಕೆ ? ಹಾಗಾಗಿ ಕೂಡಲೇ ಅಯೋಧ್ಯ ವೈಶ್ಯ ನಾಮಧಾರಿ ನಗರ್ತ ಎಂಬ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ವಿತರಿಸುವ ಕೆಲಸ ಆಗಬೇಕು ಹಾಗು ನಗರ್ತ, ನಾಮಧಾರಿ ನಗರ್ತ, ನಾಮಧಾರಿ ಎಂಬ ಎಲ್ಲಾ ಹೆಸರುಗಳು ಒಂದೇ ಸಮುದಾಯವನ್ನು ಸೂಚಿಸುತ್ತವೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ದೇವರಾಜ್, ದಾಮೋದರ್, ಸುಗುಟೂರು ಸತೀಶ್, ನಾಗರಾಜ್ ಬಾಬು, ಮಲ್ಲಪ್ಪ, ಹರೀಶ್, ನವೀನ್, ಮಂಜುನಾಥ್ ಪ್ರಸಾದ್, ಪ್ರಕಾಶ್‌ಬಾಬು, ಶ್ರೀ ರಾಮಪ್ಪ, ಅಶ್ವತ್ಥ, ಭೀಮೇಶ್, ಚಂದ್ರಶೇಖರ್, ವೆಂಕಟೇಶ್ ನಾಗರಾಜ್ ಹಾಜರಿದ್ದರು.








