Sidlaghatta, Chikkaballapur : ನಗರದ ಸ್ವಚ್ಚತೆ ಮತ್ತು ಪಾರದರ್ಶಕ ಆಡಳಿತ ಕುರಿತಾಗಿ ನಡೆದ ಸಭೆಯಲ್ಲಿ ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರು ಹೊಂದಾಣಿಕೆಯಿಂದ ಕೆಲಸ ಮಾಡಿದಾಗಷ್ಟೇ ನಗರ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ನಗರಸಭೆಗೆ ಬೀಗ ಹಾಕಿ. ನಾನು ಅಧಿಕಾರದಲ್ಲಿರುವವರೆಗೂ ಸ್ವಚ್ಚತಾ ಕಾರ್ಯವನ್ನು ನನ್ನ ಖರ್ಚಿನಿಂದ ಮಾಡಿಸುತ್ತೇನೆ” ಎಂದು ಅವರು ಎಚ್ಚರಿಕೆ ನೀಡಿದರು.
ನಗರಸಭೆ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕರು ಭಾಗವಹಿಸಿ ಮಾತನಾಡಿದರು.
“ಇತ್ತೀಚೆಗೆ ವಾರ್ಡ್ ಸಂಖ್ಯೆ 30ರಲ್ಲಿ ಕೊಳವೆಬಾವಿ ಮೋಟರ್ ರಿಪೇರಿಗೆ ₹2.8 ಲಕ್ಷ ಬಿಲ್ ಹಾಕಲಾಗಿದೆ. ನಾನು ಖುದ್ದಾಗಿ ಮೂರು ಕೊಳವೆಬಾವಿಗಳನ್ನು ₹3 ಲಕ್ಷ ವೆಚ್ಚದಲ್ಲಿ ರಿಪೇರಿ ಮಾಡಿಸಿದ್ದೇನೆ. ಹಾಗಾದರೆ ಒಂದು ಕೊಳವೆಬಾವಿಗೆ ಇಷ್ಟು ವೆಚ್ಚ ಹೇಗೆ? ಮುಂದಿನಿಂದ ಯಾವುದೇ ಬಿಲ್ ಅಥವಾ ಖಾತೆ ನನ್ನ ಗಮನಕ್ಕೆ ತರದೇ ಪಾವತಿ ಮಾಡಬಾರದು” ಎಂದು ಹೇಳಿದರು.
ಸಭೆಯ ಸಂದರ್ಭದಲ್ಲಿ ಶಾಸಕರು ಸದಸ್ಯರ ನಡುವೆ ನಡೆಯುತ್ತಿರುವ ಅಹಿತಕರ ವಾಗ್ವಾದಗಳ ಮೇಲೂ ಅಸಮಾಧಾನ ವ್ಯಕ್ತಪಡಿಸಿ, “ಸಭೆಗೆ ಬರುವ ಉದ್ದೇಶ ಜನರ ಸಮಸ್ಯೆ ಪರಿಹಾರ ಚರ್ಚೆ ಮಾಡುವುದು, ಪರಸ್ಪರ ಆರೋಪ-ಪ್ರತ್ಯಾರೋಪ ಅಲ್ಲ” ಎಂದರು.
ಅವರು ಮುಂದಾಗಿ ನಗರಸಭೆಯ ಹಣಕಾಸು ಅಸಮರ್ಪಕತೆಯ ವಿಚಾರವನ್ನು ಉಲ್ಲೇಖಿಸಿ, “ರಾಜ್ಯದಲ್ಲಿ ₹5 ಕೋಟಿಗೂ ಹೆಚ್ಚು ಸಾಲವಿರುವ ಏಕೈಕ ನಗರಸಭೆ ಶಿಡ್ಲಘಟ್ಟದದು. ಜನಸಾಮಾನ್ಯರ ತೆರಿಗೆ ಹಣವನ್ನು ವ್ಯರ್ಥಗೊಳಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮನೆಮನೆ ಸರ್ವೇ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಅವರು ಪಾರದರ್ಶಕ ಆಡಳಿತಕ್ಕಾಗಿ ತಿಂಗಳಿಗೊಮ್ಮೆ ಆದಾಯ-ಖರ್ಚಿನ ವಿವರವನ್ನು ನೋಟೀಸ್ ಬೋರ್ಡ್‌ನಲ್ಲಿ ಪ್ರಕಟಿಸುವಂತೆ ಸೂಚನೆ ನೀಡಿದರು. “ಪ್ರತಿಯೊಬ್ಬ ಸದಸ್ಯರು ತಮ್ಮ ವಾರ್ಡ್‌ಗಳನ್ನು ತಮ್ಮ ಸ್ವಂತ ಮನೆಗಳಂತೆ ನೋಡಿಕೊಳ್ಳಬೇಕು. ನಗರಾಭಿವೃದ್ಧಿ ಎಲ್ಲರ ಹೊಣೆ” ಎಂದು ಶಾಸಕರು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ರೂಪ ನವೀನ್, ಪೌರಾಯುಕ್ತೆ ಅಮೃತ, ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.