Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡರ ಪರವಾಗಿ ಮತಯಾಚನೆ ಮಾಡಲು ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಶನಿವಾರ ಆಗಮಿಸಿದ್ದು ನಗರದಲ್ಲಿ ರೋಡ್ ಶೋ ನಡೆಸಿದರು.
ಮಧ್ಯದಲ್ಲಿ ಪ್ರಚಾರ ವಾಹನದಿಂದ ಕೆಳಗಿಳಿದ ಕಿಚ್ಚ ಸುದೀಪ್ ಅವರು ಕಾಲ್ನಡಿಗೆಯಲ್ಲಿ ಸೀಕಲ್ ರಾಮಚಂದ್ರಗೌಡರ ಕೈ ಹಿಡಿದು ಪಾದಯಾತ್ರೆ ನಡೆಸಿದರು.
“ಸೀಕಲ್ ರಾಮಚಂದ್ರಗೌಡರು ನನ್ನ ಹಳೆ ಪರಿಚಯ. ಬಹಳ ಒಳ್ಳೆಯವರು. ವಿದ್ಯಾವಂತರು ಹಾಗು ಬುದ್ಧಿವಂತರು. ಹಣ ಮಾಡೋಕೆ ಅವರು ರಾಜಕೀಯಕ್ಕೆ ಬಂದಿಲ್ಲ. ಅದು ಅವರ ಬಳಿ ಸಾಕಷ್ಟು ಇದೆ. ನಿಮ್ಮ ಸೇವೆ ಮಾಡೋಕೆ ಬಂದಿದ್ದಾರೆ. ಒಂದು ಅವಕಾಶ ರಾಮಚಂದ್ರಗೌಡರಿಗೆ ನೀಡಿ. ಮೇ 10ಕ್ಕೆ ನೀವೆಲ್ಲರು ಅವರಿಗೆ ಆಶೀರ್ವಾದ ಮಾಡ್ತೀರ ಅಂತ ನಾನು ನಂಬಿದ್ದೀನಿ. ಶಿಡ್ಲಘಟ್ಟದಲ್ಲಿ ಸಿಲ್ಕು ಮತ್ತು ಮಿಲ್ಕು ಜೊತೆ ನಮ್ ಜನ ಕೂಡ ಪ್ರಸಿದ್ದಿ. ರಾಮಚಂದ್ರಗೌಡರು ಗೆದ್ದಮೇಲೆ ಮತ್ತೆ ನಿಮ್ಮ ಊರಿಗೆ ನಾನು ಬರ್ತೀನಿ” ಎಂದು ಕಿಚ್ಚ ಸುದೀಪ್ ತಿಳಿಸಿದರು.
ಕಾಲ್ನಡಿಗೆಯಲ್ಲಿ ನಡೆಯುವಾಗ ನೆರೆದಿದ್ದ ಅಭಿಮಾನಿಗಳಿಗೆ ಕೈ ಬೀಸಿ, ನಮಸ್ಕಾರ ಮಾಡಿ ಅವರ ಜೊತೆಯಲ್ಲಿಯೇ ರಾಮಚಂದ್ರಗೌಡರನ್ನು ಕೈ ಹಿಡಿದು ನಡೆದು ಬಂದರು.
ನೆರೆದಿದ್ದ ಅಭಿಮಾನಿಗಳ ಅಪೇಕ್ಷೆಯ ಮೇರೆಗೆ ಕಿಚ್ಚ ಸುದೀಪ್, ವೀರ ಮದಕರಿ ಸಿನೆಮಾ ಸಂಭಾಷಣೆ ಹೇಳಿ ಅಭಿಮಾನಿಗಳನ್ನು ರಂಜಿಸಿದರು.
ಮಾಜಿ ಶಾಸಕ ಎಂ ರಾಜಣ್ಣ, ಸಂಸದ ಮುನಿಸ್ವಾಮಿ,ಛಲವಾದಿ ನಾರಾಯಣ ಸ್ವಾಮಿ, ಚಕ್ರವರ್ತಿ ಚಂದ್ರಚೂಡ್, ಜಿಲ್ಲಾ ಕಾರ್ಯದರ್ಶಿ ಬಿ.ಸಿ.ನಂದೀಶ್ ಮತ್ತು ಸಿನಿಮಾ ನಿರ್ದೇಶಕ ಆರ್. ಚಂದ್ರು ಹಾಜರಿದ್ದರು.







