
Cheemangala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (SKDRDP) ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ (Mahila Jnana Vikasa Program) ಆರಂಭಿಸಿರುವ ಗ್ರಾಮೀಣ ಭಾಗದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬೋಧನಾ ತರಗತಿಗಳಿಗೆ ಚಾಲನೆ ನೀಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಶಂಕರ್ ಅವರು ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿಗಳ ಮಾರ್ಗದರ್ಶನದಲ್ಲಿ ರಾಜ್ಯದ ಉದ್ದಗಲಕ್ಕು ಅನೇಕ ರೀತಿಯ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು ಸಮಾಜದ ಕಟ್ಟಕಡೆಯ ಅರ್ಹ ವ್ಯಕ್ತಿಗೂ ಈ ಯೋಜನೆಯ ಉಪಯೋಗ ಸಿಗುವಂತಾಗಲಿ ಎಂದು ತಿಳಿಸಿದರು.
ಧರ್ಮಸ್ಥಳ ಯೋಜನಾ ಸಂಘದ ತಾಲೂಕು ಯೋಜನಾಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಧರ್ಮಸ್ಥಳದ ಧರ್ಮಾಕಾರಿಗಳ ಧರ್ಮಪತ್ನಿ ಹೇಮಾವತಿ ಅಮ್ಮನವರ ಕನಸಿನ ಕೂಸು ಜ್ಞಾನವಿಕಾಸ ಕಾರ್ಯಕ್ರಮ. ಈ ಕಾರ್ಯಕ್ರಮದ ಮೂಲಕ ಲಕ್ಷಾಂತರ ಮಹಿಳೆಯರಿಗೆ ಸ್ವ ಉದ್ಯೋಗದ ಕಲ್ಪನೆಯನ್ನು ಸಾಕಾರಗೊಳಿಸಲಾಗುತ್ತಿದೆ ಎಂದರು.
ಮಾತೃಶ್ರೀಯವರಿಗೆ ಸಮಾಜದ ದುರ್ಬಲ ವರ್ಗದವರ ಬಗ್ಗೆ ಇರುವ ಕಾಳಜಿಯಿಂದಾಗಿ ಇಂತಹ ಹೊಸ ಹೊಸ ಕಾರ್ಯಕ್ರಮಗಳು ನಡೆಯುತ್ತಿದ್ದು ಅಗತ್ಯ ಇರುವ ಎಲ್ಲರೂ ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ಹೆಚ್ಚುವರಿ ಬೋಧನಾ ತರಗತಿಗಳು ಯಶಸ್ವಿಯಾಗಿ ನಡೆದು ವಿದ್ಯಾರ್ಥಿಗಳ ಬದುಕು ಉತ್ತಮಗೊಳ್ಳಲಿ ಎಂದು ಕೋರಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ಶಿವಕುಮಾರ್, ನವೀನ್ ಯಶೋದರ್, ಜ್ಞಾನವಿಕಾಸ ಸಮನ್ವಯಾಕಾರಿ ಸುಮಂಗಲ, ಸೇವಾಪ್ರತಿನಿ ಭಾಗ್ಯಲಕ್ಷಿ, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.