Sidlaghatta : ನಾಡಪ್ರಭು ಶ್ರೀಕೆಂಪೇಗೌಡರ ಜಯಂತಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದು, ಅವರ ವಿರುದ್ದ ಘೋಷಣೆಗಳನ್ನು ಕೂಗಿದ್ದು ಹಾಗೂ ಅವರ ಕಾರಿನತ್ತ ಚಪ್ಪಲಿ ಎಸೆಯುವಂತ ಕಾರ್ಯ ಎಂದಿಗೂ ನಮ್ಮ ಒಕ್ಕಲಿಗ ಸಮುದಾಯವರು ಮಾಡಿಲ್ಲ, ಮಾಡುವುದೂ ಇಲ್ಲ ಎಂದು ರಾಜ್ಯ ಒಕ್ಕಲಿಗರ ಒಕ್ಕೂಟ ಕರ್ನಾಟಕದ ರಾಜ್ಯ ಉಪಾಧ್ಯಕ್ಷ ಪೂಲಕುಂಟಹಳ್ಳಿ ರಘುನಾಥರೆಡ್ಡಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ರಾಜ್ಯ ಒಕ್ಕಲಿಗರ ಒಕ್ಕೂಟದ ಪದಾಧಿಕಾರಿಗಳ ಜತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರದೀಪ್ ಈಶ್ವರ್ ಅವರಿಗೆ ಆಗದವರು ಮತ್ತು ನಮ್ಮ ಒಕ್ಕಲಿಗ ಸಮುದಾಯಕ್ಕೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶದಿಂದ ಯಾರೋ ಕಿಡಿಗೇಡಿಗಳು ಮಾಡದಿ ಕೃತ್ಯವಿದು. ಪೊಲೀಸ್ ಇಲಾಖೆ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಜರುಗಿಸುತ್ತದೆ ನಮ್ಮದೇನು ಅಭ್ಯಂತರವಿಲ್ಲ ಎಂದರು.
ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರು ನಮ್ಮ ಸಮುದಾಯಕ್ಕೆ ಮಾತ್ರವಲ್ಲ ಜಗತ್ತಿಗೆ ಹೆಮ್ಮೆ. ಅವರ ಜಯಂತಿಯಂದು ನಡೆದ ಕೃತ್ಯಕ್ಕೆ ರಾಜ್ಯ ಒಕ್ಕಲಿಗರ ಒಕ್ಕೂಟವು ವಿಷಾಧ ವ್ಯಕ್ತಪಡಿಸುತ್ತದೆ. ನಮ್ಮ ಸಮುದಾಯದ ಕಾರ್ಯಕ್ರಮದಲ್ಲಿ ಅಹ್ವಾನಿತರಾದ ಗೌರವಾನ್ವಿತ ಪ್ರದೀಪ್ ಈಶ್ವರ್ ಅವರಿಗೆ ನಡೆದ ಅಪಮಾನಕ್ಕೆ ನಾವು ವಿಷಾಧ ವ್ಯಕ್ತಪಡಿಸುತ್ತೇವೆ ಎಂದರು.
ಖಂಡನೆ :
ಆದರೆ ಪ್ರದೀಪ್ ಈಶ್ವರ್ ಅವರು ಶಾಸಕ ಸ್ಥಾನಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವ ಮೂಲಕ ಅವರಿಗೆ ಮತಕೊಟ್ಟು ಗೆಲ್ಲಿಸಿದ ಕ್ಷೇತ್ರದ ಎಲ್ಲ ಜಾತಿ ಧರ್ಮಗಳನ್ನೊಳಗೊಂಡ ಮತದಾರರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಅವರು ದೂರಿ, ಪ್ರದೀಪ್ ಈಶ್ವರ್ ಅವರಿಗೆ ಕ್ಷೇತ್ರದ ಎಲ್ಲ ಧರ್ಮ ಜಾತಿಯ ಮತದಾರರು ಕೂಡ ಮತಕೊಟ್ಟು ಗೆಲ್ಲಿಸಿದ್ದಾರೆ. ಮುಖ್ಯವಾಗಿ ಅವರು ಜೆಡಿಎಸ್‌ನ ಮತಗಳಿಂದಲೆ ಗೆದ್ದಿದ್ದು ಎಂದರೂ ತಪ್ಪಾಗಲಾರದು.
ಗೆದ್ದ ಮೇಲೆ ಅವರು ಬುದ್ದಿ ಭ್ರಮಣೆಯಾದಂತೆ ವರ್ತಿಸುತ್ತಿದ್ದಾರೆ. ಎರಡು ಬಾರಿ ಸಿಎಂ ಆಗಿ, ಕೇಂದ್ರದಲ್ಲಿ ಮಂತ್ರಿಯಾಗಿ ಅಪಾರ ಅನುಭವ ಇರುವ, ರೈತರು ಹಾಗೂ ಜನ ಸಾಮಾನ್ಯರ ಪರ ಕಾಳಜಿಯುಳ್ಳ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡಲು ಪ್ರದೀಪ್ ಈಶ್ವರ್‌ಗೆ ನೈತಿಕತೆ ಇಲ್ಲ. ಮಾತನಾಡುವಾಗ ಪ್ರಜ್ಞೆ ಇದ್ದು ಮಾತನಾಡಬೇಕೆಂದು ಎಚ್ಚರಿಕೆ ಕೊಟ್ಟರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು, ಶಾಸಕರೂ ಆದ ಎಸ್.ಎನ್.ಸುಬ್ಬಾರೆಡ್ಡಿ, ಡಾ.ಎಂ.ಸಿ.ಸುಧಾಕರ್, ಗೌರಿಬಿದನೂರಿನ ಎನ್.ಎಚ್.ಶಿವಶಂಕರ್‌ರೆಡ್ಡಿ ಅವರಿಂದ ಪ್ರದೀಪ್ ಈಶ್ವರ್ ಗೆದ್ದಿದ್ದು. ಆದರೆ ಗೆದ್ದ ಮೇಲೆ ಇವರ ಬೆನ್ನಿಗೆ ಚೂರಿ ಹಾಕುವ, ಇವರಿಗೆ ಮುಜುಗರವಾಗುವ, ಕಾಂಗ್ರೆಸ್‌ಗೆ ಅಪಮಾನವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಅವರ ಬಳಿ ಮಾತ್ರ ಇಟ್ಟುಕೊಳ್ಳಬೇಡಿ, ಅವರು ಸಾಮಾನ್ಯ ರೈತ ಕುಟುಂಬದಿಂದ ಬಂದವರು. ಅವರ ನಡೆ ನುಡಿ ಸೇವಾ ಕಾರ್ಯಗಳು ಇಡೀ ರಾಜ್ಯದಲ್ಲಿಯೆ ಮಾದರಿಯಾಗಿದೆ. ಅವರ ಬಗ್ಗೆ ಮಾತನಾಡುವಾಗ ಮೈಯ್ಯೆಲ್ಲಾ ಎಚ್ಚರಿಕೆ ಇಟ್ಟುಕೊಂಡು ಮಾತನಾಡಬೇಕೆಂದರು.
ನೀವು ಪದೇ ಪದೇ ಓಬಿಸಿ ಹುಡುಗ ಅನ್ನಬೇಡ, ನಾವು ಓಬಿಸಿಗಳೆ. ನಮ್ಮ ಸಮುದಾಯದ ಮತಗಳು ನಿಮಗೆ ಬಂದಿವೆ. ಮುಂದಿನ ದಿನಗಳಲ್ಲಾದರೂ ನಿಮ್ಮ ನಡೆ ನುಡಿಯನ್ನು ಬದಲಿಸಿಕೊಳ್ಳಿ. ಇಲ್ಲವಾದಲ್ಲಿ ರಾಜ್ಯಾಧ್ಯಂತ ಒಕ್ಕಲಿಗರ ಒಕ್ಕೂಟದಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ನಾಗರಾಜ್ ರೆಡ್ಡಿ, ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಮಂಜುನಾಥ್‌ಗೌಡ, ಗೌರಿಬಿದನೂರು ತಾಲ್ಲೂಕು ಅಧ್ಯಕ್ಷ ವೆಂಕಟರೆಡ್ಡಿ, ಚಿಂತಾಮಣಿ ತಾಲ್ಲೂಕು ಅಧ್ಯಕ್ಷ ಬಾಬುರೆಡ್ಡಿ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಶ್ರೀನಾಥರೆಡ್ಡಿ ಹಾಜರಿದ್ದರು.








