
Sidlaghatta : ಹೆರಿಗೆ ಮಾಡಿಸಿಕೊಳ್ಳುವ ಮಹಿಳೆಯರಂತೆ ಸೀರೆ ಉಟ್ಟು, ಹೂವಿನಿಂದ ಅಲಂಕಾರಗೊಂಡು, ₹5–6 ಲಕ್ಷ ವೆಚ್ಚದ ಅದ್ದೂರಿ ಸೀಮಂತ ಕಾರ್ಯಕ್ರಮ ಮಾಡಿಸಿಕೊಂಡಿದ್ದ “ಸೀತೆ” ಎಂಬ ಹಸು ಈಗ ನಿಜಕ್ಕೂ ಕರು ಹಾಕಿದೆ! ಶಿಡ್ಲಘಟ್ಟ ತಾಲ್ಲೂಕಿನ ಅಂಬಿಗನಹಳ್ಳಿ ಗ್ರಾಮದ ಮನೆಯಲ್ಲಿ ಈಗ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
In English: A cow named “Seethe” in Ambiganahalli village, Sidlaghatta taluk, was given a lavish ₹5-6 lakh “seemantha” (traditional baby shower) ceremony after years of failing to conceive — dressed in a saree and decorated with flowers, just like a pregnant woman. The vow paid off: the cow has now actually given birth to a calf, delighting the family that had prayed for this moment.
ಮನೆಯಲ್ಲಿ ಸಾಕಿದ್ದ ಸೀತೆ ಹಸು ಹಲವು ವರ್ಷಗಳಿಂದ ಗರ್ಭ ಧರಿಸಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಮನೆಯ ತರುಣ್ ಎಂಬ ಯುವಕ, ಹಸು ಗರ್ಭ ಧರಿಸಿದರೆ ಗ್ರಾಮದ ದೇವತೆಗೆ ಹರಕೆ ತೀರಿಸುವುದರ ಜೊತೆಗೆ ಸೀಮಂತ ಕಾರ್ಯಕ್ರಮ ನೆರವೇರಿಸಿ ಸಾರ್ವಜನಿಕರಿಗೆ ಊಟ ಹಾಕಿಸುವುದಾಗಿ ಪ್ರಾರ್ಥಿಸಿದ್ದರು. ಹರಕೆ ಈಡೇರಿದ ಹಿನ್ನೆಲೆಯಲ್ಲಿ ಕುಟುಂಬದವರು ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ಆಯೋಜಿಸಿದ್ದರು.
ಸೀಮಂತ ಕಾರ್ಯಕ್ರಮದಂದು ಹಸುವಿಗೆ ಸೀರೆ ಉಡಿಸಿ, ಹೂವು ಹಾಗೂ ಹಾರಗಳಿಂದ ಅಲಂಕರಿಸಲಾಗಿತ್ತು. ಹಸುವಿಗೆ ಇಷ್ಟವಾಗುವ ವಿವಿಧ ಬಗೆಯ ಹಣ್ಣುಗಳು, ತಿಂಡಿ–ತಿನಿಸುಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಇಟ್ಟು ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಲಾಗಿತ್ತು. ಕಾರ್ಯಕ್ರಮಕ್ಕೆ ಗ್ರಾಮಸ್ಥರು, ಬಂಧು–ಬಳಗ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಜನರನ್ನು ಆಹ್ವಾನಿಸಲಾಗಿತ್ತು. ಆಹ್ವಾನ ಪತ್ರಿಕೆ ಮುದ್ರಿಸಿ ಹಂಚಲಾಗಿತ್ತು. ಬಂದಿದ್ದ ಸಾರ್ವಜನಿಕರಿಗೆ ಹೋಳಿಗೆ ಊಟ ಸೇರಿದಂತೆ ವಿವಿಧ ಸಿಹಿ–ತಿನಿಸುಗಳೊಂದಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಹಸುವಿನ ಮೇಲಿನ ಪ್ರೀತಿ ಹಾಗೂ ಹರಕೆ ತೀರಿಸುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಸುಮಾರು ₹5ರಿಂದ ₹6 ಲಕ್ಷ ವೆಚ್ಚ ಮಾಡಲಾಗಿತ್ತು.
ಇದೀಗ ಸೀತೆ ಹಸು ಕರು ಹಾಕಿದ್ದು, ಕರುವನ್ನು ಕಂಡು ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳ ಬಳಿಕ ಹಸು ಗರ್ಭ ಧರಿಸಿ ಕರು ಹಾಕಿರುವುದು ಕುಟುಂಬದ ಪಾಲಿಗೆ ವಿಶೇಷ ಸಂತಸದ ಕ್ಷಣವಾಗಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಿದೆ.