Home News ಮಹಿಳಾ ಸ್ವಸಹಾಯ ಸಂಘಗಳು ಹಾಗೂ ರೈತರಿಗೆ ಸಾಲ ವಿತರಣೆ

ಮಹಿಳಾ ಸ್ವಸಹಾಯ ಸಂಘಗಳು ಹಾಗೂ ರೈತರಿಗೆ ಸಾಲ ವಿತರಣೆ

0
Sidlaghatta DCC Bank Farmers Women Society KCC Loan

Sidlaghatta : ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕಾರಣ ಕಲುಷಿತಗೊಂಡಿದೆ. ಇದು ಶುದ್ದವಾಗಬೇಕಾದರೆ ಎರಡೂ ಜಿಲ್ಲೆಗಳ ಹೆಣ್ಣು ಮಕ್ಕಳು ಕಾಸು ತೆಗೆದುಕೊಂಡು ಓಟು ಹಾಕುವುದಿಲ್ಲ, ನಮ್ಮ ಮತಗಳನ್ನು ಮಾರಿಕೊಳ್ಳುವುದಿಲ್ಲ ಎಂಬ ಶಪಥ ಮಾಡುವ ಮೂಲಕ ನೂತನ ಆಂದೋಲನ ಶುರು ಮಾಡಬೇಕು ಎಂದು DCC Bank ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ಶಿಡ್ಲಘಟ್ಟ ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ಮಹಿಳಾ ಸ್ವಸಹಾಯ ಸಂಘಗಳು ಹಾಗೂ ರೈತರಿಗೆ KCC ಮತ್ತು ಮದ್ಯಮಾವಧಿ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನೀವು ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ದುಡ್ಡಿಗೆ ಗೌರವ ನೀಡಬಾರದು. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಬಡ್ಡಿ ರಹಿತ ಸಾಲ ಪಡೆದಿರುವ ಸುಮಾರು 6 ಲಕ್ಷ 70 ಸಾವಿರ ಹೆಣ್ಣುಮಕ್ಕಳು ಕಾಸು ತೆಗೆದುಕೊಂಡು ಓಟು ಹಾಕುವುದಿಲ್ಲ ಎಂಬ ಶಪಥ ಮಾಡಿಬೇಕು. ಬೇಕಾದವರಿಗೆ ಓಟು ಹಾಕುವ ಸ್ವಾತಂತ್ರ್ಯವನ್ನು ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಮಗೆಲ್ಲ ಕಲ್ಪಿಸಿದ್ದಾರೆ. 1500 ಅಡಿ ಆಳದ ಕೊಳವೆಬಾವಿ ನೀರು ತೆಗೆದು ವ್ಯವಸಾಯ ಮಾಡಿ ಜೀವನ ಸಾಗಿಸಿದ ನಾವುಗಳು ನಿಜವಾದ ಸ್ವಾಭಿಮಾನಿಗಳು. ಇಂತಹ ಸ್ವಾಭಿಮಾನವನ್ನು ಚುನಾವಣೆ ಸಮಯದಲ್ಲಿ 500-1000 ರೂಗೆ ಮಾರಿಕೊಳ್ಳಬೇಡಿ ಎಂದರು.

ಸಾರಾಯಿ ಬೇಡ ಎಂದು ಹೊರಾಟ ಮಾಡಿದ ಕೀರ್ತಿ ಮಹಿಳೆಯರದ್ದು, ಹಾಗಾಗಿ ಪ್ರತಿಯೊಬ್ಬ ಹೆಣ್ಣು ಮಗುವು ರಾಜಕಾರಣ ಶುದ್ದಗೊಳಿಸಲು ಆಂದೋಲನ ಮಾಡುವ ಮೂಲಕ ಸಿಡಿದೇಳಬೇಕು. ದೇಶದ ಗಡಿ ಕಾಯುವ ಸೈನಿಕ ಹಾಗೂ ಬೆಳೆ ಬೆಳೆಯುವ ರೈತನನ್ನು ನಾವು ಉಳಿಸಿಕೊಂಡಾಗ ಮಾತ್ರ ದೇಶ ಉಳಿಯುತ್ತದೆ ಎಂದರು.

ಬೆಂಗಳೂರಿಗೆ ನಾವು ಹತ್ತಿರವಾಗಿರುವುದರಿಂದ ಬೆಂಗಳೂರಿನ ಭೂಗಳ್ಳರು ಚುನಾವಣೆ ಸಮಯದಲ್ಲಿ ಬ್ಯಾಗ್ ಹಿಡಿದುಕೊಂಡು ಬರ‍್ತಾರೆ, ಅಂತಹವರನ್ನು ಪ್ರೋತ್ಸಾಹಿಸದೇ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿ ನಮ್ಮ ಸ್ವಾಭಿಮಾನ ಉಳಿಸಿಕೊಳ್ಳಬೇಕು ಎಂದರು.

ಮಹಿಳಾ ಸ್ವ ಸಹಾಯ ಸಂಘಗಳು ಸೇರಿದಂತೆ ರೈತರಿಗೆ ವಿತರಣೆ ಮಾಡುತ್ತಿರುವ ಸಾಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವುದು ಸೇರಿದಂತೆ ಉಳಿತಾಯದ ಹಣವನ್ನೂ ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಬ್ಯಾಂಕಿನ ಏಳಿಗೆಗಾಗಿ ಶ್ರಮಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘದ ಸುಮಾರು 32 ಸ್ವಸಹಾಯ ಸಂಘಗಳಿಗೆ 1 ಕೋಟಿ 51 ಲಕ್ಷ, ರೈತರ ಕೆಸಿಸಿ ಸಾಲ 4 ಕೋಟಿ 22 ಲಕ್ಷ, ರೈತರ ಮದ್ಯಮಾವಧಿ ಸಾಲ 74 ಲಕ್ಷ ಸೇರಿ ಒಟ್ಟು 6 ಕೋಟಿ 39 ಲಕ್ಷ ವಿತರಣೆ ಮಾಡಲಾಯಿತು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ನಿರ್ದೇಶಕ ನಾಗನಾಳ ಸೋಮಣ್ಣ, ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಉಪಾಧ್ಯಕ್ಷೆ ಶೋಭಾರಾಣಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಟೌನ್ ಎಸ್‌ಎಫ್‌ಸಿಎಸ್ ಕಾರ್ಯನಿರ್ವಹಣಾಧಿಕಾರಿ ದೇವಿಕ, ಟೌನ್ ಎಸ್‌ಎಫ್‌ಸಿಎಸ್ ನಿರ್ದೇಶಕರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version