Sidlaghatta : ಅನುದಾನಿತ ಶಾಲೆಯಲ್ಲಿ ಕೆಲಸ ಮಾಡಿರುವ, 45 ವರ್ಷಗಳ ಕಾಲ ಎಂ.ಎಲ್.ಸಿ ಆಗಿ ಅನುಭವವಿರುವ ಬಸವರಾಜ ಹೊರಟ್ಟಿ ಸೇರಿದಂತೆ ಯಾವೊಬ್ಬ ಎಂ.ಎಲ್.ಸಿ ಯೂ ಶಿಕ್ಷಕರ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದ ಗೌರವಾಧ್ಯಕ್ಷ ಗೋಪಿನಾಥ್ ಆರೋಪಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇವಲ ಚುನಾವಣೆಗಳನ್ನು ಅವರದ್ದೇ ಆದ ಮಾರ್ಗದಲ್ಲಿ ಮಾಡಿಕೊಂಡು ಗೆದ್ದಿರುವ ಹದಿನಾಲ್ಕೂ ಮಂದಿ ಎಂ.ಎಲ್.ಸಿ ಗಳಲ್ಲಿ ಯಾರೊಬ್ಬರೂ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದಾಗಲೀ, ಅವರ ನೋವಿಗಾಗಲೀ ಸ್ಪಂದಿಸುತ್ತಿಲ್ಲ ಎಂದರು.
ಅನುದಾನಿತ ಶಾಲಾ ಶಿಕ್ಷಕರಿಗೂ ಆರೋಗ್ಯ ಸಂಜೀವಿನಿ ಯೋಜನೆಯ ನೆರವನ್ನು ಕಲ್ಪಿಸಿಕೊಡಬೇಕು. ಓಪಿಎಸ್ ಪಿಂಚಣಿ ಸೌಲಭ್ಯವನ್ನು ಅನುದಾನಿತ ನೌಕರರಿಗೂ ಸಿಗಬೇಕು. ಅನುದಾನಿತ ಶಾಲೆಗಳಿಗೂ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಮಾಡಿಕೊಳ್ಳಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.
ರಾಜ್ಯದಲ್ಲಿ ಶೇ 60 ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳಿಗೆ ನೋಟೀಸ್ ಕೊಡುವ ಮೂಲಕ ಅನುದಾನಿತ ಪ್ರೌಢಶಾಲೆಗಳ ಮೇಲೆ ಸರ್ಕಾರ ಗದಾಪ್ರಹಾರ ಮಾಡುತ್ತಿರುವುದನ್ನು ಖಂಡಿಸುತ್ತೇವೆ. ಮೊದಲು ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು. ಶಿಕ್ಷಕರೇ ಇಲ್ಲದಿದ್ದರೆ ಫಲಿತಾಂಶ ಹೇಗೆ ತಾನೆ ಬರಲು ಸಾಧ್ಯ. ಶಿಕ್ಷಕರಿದ್ದೂ ಆನಂತರ ಫಲಿತಾಂಶ ಕಡಿಮೆ ಬಂದರೆ ಶಾಲೆಗಳ ಮೇಲೆ ಕ್ರಮ ವಹಿಸಬೇಕು ಎಂದರು.
ಒಳಮೀಸಲಾತಿ ಜಾರಿಗೆ ನಾವು ವಿರೋಧಿಸುತ್ತಿಲ್ಲ. ಒಳಮೀಸಲಾತಿ ಜಾರಿಗೆ ಬರುವ ಮುಂಚೆ ಖಾಲಿ ಇದ್ದ ಹುದ್ದೆಗಳನ್ನು ಮೊದಲು ತುಂಬಿ. ಆನಂತರ ಒಳಮೀಸಲಾತಿ ಜಾರಿಗೊಳಿಸಿ ಎಂಬುದು ನಮ್ಮ ಆಗ್ರಹ. ಆರು ತಿಂಗಳಿನಿಂದ ನಡೆಯುತ್ತಿರುವ ಒಳಮೀಸಲಾತಿ ಸಮೀಕ್ಷೆ ಇನ್ನೂ ಆರು ತಿಂಗಳಾದರೂ ಬಗೆಹರಿಯುವುದಿಲ್ಲ. ಒಳಮೀಸಲಾತಿ ನೆಪದಲ್ಲಿ ಹುದ್ದೆಗಳನ್ನು ತುಂಬದಿರುವುದು ಮಕ್ಕಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಹೇಳಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್. ವಿ. ವೆಂಕರೆಡ್ಡಿ, ಶಾರದಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸುಮನ್, ಸಿದ್ದರಾಜು, ಚಂದ್ರಶೇಖರ್, ಮುನಿನಾರಾಯಣಸ್ವಾಮಿ, ನಾರಾಯಣಸ್ವಾಮಿ ಹಾಜರಿದ್ದರು