Sidlaghatta : ರೈತ ದೇಶದ ಬೆನ್ನೆಲುಬು ಎಂದು ಭಾಷಣ ಮಾಡುವ ಸರ್ಕಾರ ಹಾಗೂ ಜನಪ್ರತಿನಿಧಿಗಳು ರೈತನ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಳುವನಹಳ್ಳಿ ಸಿ.ವಿ.ಲೋಕೇಶ್ ಗೌಡ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಘೋಷ್ಟಿ ನಡೆಸಿ ಮಾತನಾಡಿದ ಅವರು, ಅವಿಬಾಜಿತ ಕೋಲಾರ ಜಿಲ್ಲೆ ಈ ಹಿಂದೆ ಗೋಲ್ಡ್, ಸಿಲ್ಕ್ ಮತ್ತು ಮಿಲ್ಕ್ ಗೆ ಹೆಸರುವಾಸಿಯಾಗಿತ್ತು. ಈಗಾಗಲೇ ಇಲ್ಲಿನ ಗೋಲ್ಡ್ ಎಲ್ಲಾ ಖಾಲಿಯಾಗಿದೆ. ಇನ್ನುಳಿದ ಸಿಲ್ಕ್ ಮತ್ತು ಮಿಲ್ಕಿನ ವಿಚಾರಕ್ಕೆ ಬಂದರೆ ಈ ಭಾಗದ ರೇಷ್ಮೆ ಬೆಳೆಗಾರರಿಗೆ ಈ ಹಿಂದೆ ಸರ್ಕಾರದಿಂದ ಸಿಗುತ್ತಿದ್ದ ಬಹುತೇಕ ಯೋಜನೆಗಳನ್ನು ಇಂದಿನ ಸರ್ಕಾರ ನಿಲ್ಲಿಸಿದೆ. ಕೃಷಿ ಉಪ ಕಸಬುಗಳಾದ ಹೈನುಗಾರಿಕೆ ಸೇರಿದಂತೆ ಕುರಿ ಸಾಕಾಣಿಕೆಗೆ ಈ ಹಿಂದೆ ನೀಡುತ್ತಿದ್ದ ಸಾಲ ಬಂದ್ ಮಾಡಿದೆ. ಹೀಗೆ ಒಂದೊಂದು ಯೋಜನೆಯನ್ನು ನಿಲ್ಲಿಸುತ್ತಾ ಹೋದರೆ ರೈತ ಕೃಷಿ ಮಾಡುವುದಾದರೂ ಹೇಗೆ? ಕೃಷಿಯ ಉಪಕಸುಬುಗಳು ಉಳಿಯುವುದಾದರೂ ಹೇಗೆ ಎಂದರು.
ಪ್ರತಿಯೊಬ್ಬರೂ ರೈತನನ್ನು ಗೌರವಿಸುವ ಕೆಲಸ ಆಗಬೇಕು. ಜೊತೆಗೆ ರೈತನಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕಾದರೆ ರಾಜ್ಯಾಧ್ಯಂತ ಇರುವ ಎಲ್ಲಾ ರೈತಪರ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದರು.
ಮಹಾಮಾರಿ ಕರೋನ ಸಂಕಷ್ಟದ ಸಮಯದಲ್ಲಿ ದೇಶ ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದ ಬಹುತೇಕರು ಉದ್ಯೋಗ ಕಳೆದುಕೊಂಡು ವಾಪಸ್ ಬಂದಾಗ ಅವರನ್ನು ಕೃಷಿಯೊಂದೇ ಕೈ ಹಿಡಿದಿದ್ದು, ಹಾಗಾಗಿ ಕೃಷಿ ಹಾಗು ರೈತರ ಉಳಿವಿಗಾಗಿ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ. ಆ ನಿಟ್ಟಿನಲ್ಲಿ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ರೈತಪರ ಸಂಘಟನೆಗಳ ಮುಖಂಡರೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲರನ್ನು ಜೊತೆಯಲ್ಲಿಟ್ಟುಕೊಂಡು ರೈತಪರ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಮಣ್ಣ, ಶೆಟ್ಟಹಳ್ಳಿ ನರಸಿಂಹಗೌಡ, ನರಸಿಂಹಪ್ಪ, ವೆಂಕಟಸ್ವಾಮಪ್ಪ, ರಘು ಹಾಜರಿದ್ದರು.