ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಅಗ್ರಹಾರ ಕೆರೆ ಹಾಗೂ ಚಿಕ್ಕಬಂದರಘಟ್ಟ ಕೆರೆ ಕಟ್ಟೆ ಒಡೆದು ಪಲವತ್ತಾದ ಭೂಮಿ ಕೊಚ್ಚಿ ಹೋಗಿರುವ ಘಟನೆ ನಡೆದು ನಾಲ್ಕೈದು ತಿಂಗಳು ಕಳೆದರೂ ರೈತರಿಗೆ ಈವರೆಗೂ ಪರಿಹಾರ ವಿತರಣೆಯಾಗಿಲ್ಲ. ಕೂಡಲೇ ಈ ಭಾಗದ ರೈತರಿಗೆ ಪರಿಹಾರ ವಿತರಿಸುವುದು ಸೇರಿದಂತೆ ಕೆರೆಗಳ ಪುನರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಯುವಶಕ್ತಿ ರಾಜ್ಯ ಉಪಾಧ್ಯಕ್ಷ ವಿಜಯಭಾವರೆಡ್ಡಿ ಒತ್ತಾಯಿಸಿದರು.
ಈ ವಿಷಯವಾಗಿ ಅಗ್ರಹಾರ ಕೆರೆ ಹಾಗೂ ಬಂದರಘಟ್ಟ ಕೆರೆಗಳ ಅಚ್ಚುಕಟ್ಟು ರೈತರೊಂದಿಗೆ ಶನಿವಾರ ಜಿಲ್ಲಾಧಿಕಾರಿ ಆರ್.ಲತಾ ರವರನ್ನು ಬೇಟಿಯಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳನ್ವಯ ಶೀಘ್ರ ಪರಿಹಾರ ನೀಡಬೇಕೆಂದು ಮರು ಮನವಿ ಸಲ್ಲಿಸಿ ಅವರು ಮಾತನಾಡಿದರು.
ಈ ಭಾಗದ ಎಲ್ಲಾ ರೈತರ ಜಮೀನಿನ ವಿವರಗಳನ್ನು ಕಂದಾಯ ಇಲಾಖೆ ಸಂಗ್ರಹಿಸಿ ನಾಲ್ಕೈದು ತಿಂಗಳು ಕಳೆದರೂ ಇದುವರೆಗೂ ಯಾವುದೇ ಪರಿಹಾರವಾಗಲಿ ಅಥವಾ ಅದರ ಪ್ರಗತಿಯ ವಿವರಗಳಾಗಲಿ ನೀಡಿರುವುದಿಲ್ಲ. ಕೂಡಲೇ ರೈತರಿಗೆ ಸಿಗಬೇಕಾದ ಪರಿಹಾರ ವಿತರಿಸುವುದು ಸೇರಿದಂತೆ ಈ ಕೆರೆಗಳು ನೀರಿಲ್ಲದೆ ಒಣಗಿರುವ ಕಾರಣ ಕೆರೆ ಅಂಗಳದ ಹೂಳನ್ನು ತೆಗೆಯಬಹುದಾದ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ವಿನಂತಿಸಲಾಯಿತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಆರ್.ಲತಾ ರವರು ನಷ್ಟದ ಧಾಖಲೆಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರ ನೀಡುವ ಭರವಸೆ ನೀಡಿ ಈ ಕೆರೆಗಳ ಪುನರ್ನಿರ್ಮಾಣದ ಡಿಪಿಆರ್ ಆಗಿ ಮುಂದಿನ ಹಂತದ ಕಾರ್ಯಗಳು ಪ್ರಗತಿಯಲ್ಲಿವೆಯೆಂದು ತಿಳಿಸಿದರು.
ರೈತರ ನಿಯೋಗದಲ್ಲಿ ಯುವಶಕ್ತಿ ರಾಜ್ಯ ಉಪಾಧ್ಯಕ್ಷ ವಿಜಯ ಬಾವರೆಡ್ಡಿ, ರಾಯಪ್ಪನಹಳ್ಳಿ ನಾಗರಾಜರೆಡ್ಡಿ, ಯರ್ರಹಳ್ಳಿ ಮರಿಯಪ್ಪ, ಬಂದರಘಟ್ಟ ನರಸಿಂಹರೆಡ್ಡಿ, ಚೊಕ್ಕನಹಳ್ಳಿ ನಾರಾಯಣಸ್ವಾಮಿ, ಕುದುಪಕುಂಟೆ ನರಸಿಂಹರೆಡ್ಡಿ ಹಾಜರಿದ್ದರು.