Home News ವಿಧಾನಸೌಧದ ಕದ ತಟ್ಟಿದ ಶಿಡ್ಲಘಟ್ಟ ತಾಲ್ಲೂಕಿನ ರೈತರು

ವಿಧಾನಸೌಧದ ಕದ ತಟ್ಟಿದ ಶಿಡ್ಲಘಟ್ಟ ತಾಲ್ಲೂಕಿನ ರೈತರು

0
Sidlaghatta Farmers Rain Crop Loss Government Karnataka Vidhana Soudha Visit for Compensation

ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಮತ್ತು ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆಕಟ್ಟೆಗಳು ಒಡೆದು ಹೋಗಿ ರೈತರು ಬೆಳೆದಿದ್ದ ಬೆಳೆಯಷ್ಟೇ ಅಲ್ಲದೆ ಫಲವತ್ತಾದ ಮಣ್ಣು ಕೂಡ ಕೊಚ್ಚಿ ಹೋಗಿದೆ. ಸರ್ಕಾರ ಕೂಡಲೇ ವಿಶೇಷ ವಿಪತ್ತು ಎಂದು ಪರಿಗಣಿಸಿ ರೈತರಿಗೆ ಸೂಕ್ತ ನಷ್ಟ ಪರಿಹಾರವನ್ನು ಒದಗಿಸಬೇಕೆಂದು ತಿಮ್ಮನಾಯಕನಹಳ್ಳಿ ಅಗ್ರಹಾರ ಕೆರೆ ಹಾಗೂ ಬಂದರಘಟ್ಟ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರು.

ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಅಪಾರ ನಷ್ಟವುಂಟಾದ ರೈತರಿಗೆ ಪರಿಹಾರ ನೀಡುವಲ್ಲಿ ತಾಲ್ಲೂಕು ಮತ್ತು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲವೆಂದು ರೈತರು ಬುಧವಾರ ವಿಧಾನಸೌಧದ ಬಾಗಿಲು ಬಡಿದಿದ್ದಾರೆ. ಕೆರೆ ಅಚ್ಚುಕಟ್ಟು ರೈತರು ರಾಜ್ಯ ಸಚಿವಾಲಯಗಳಿಗೆ ಚಿತ್ರ ಸಮೇತ ವರದಿ ಹಾಗೂ ಮನವಿಯನ್ನು ನೀಡಿ, ಶೀಘ್ರವಾಗಿ ಒಂದು ಎಕರೆಗೆ ಅಂದಾಜು 2 ಲಕ್ಷ ರು ನಷ್ಟ ಪರಿಹಾರ ವನ್ನು ಒದಗಿಸಿ ಸಂಕಷ್ಟದಲ್ಲಿ ಇರುವ ರೈತರಿಗೆ ನೆರವು ನೀಡಬೇಕೆಂದು ವಿನಂತಿಸಿದ್ದಾರೆ.

“ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಿಗೆ, ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತ, ಸಣ್ಣ ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿ, ಆರ್.ಡಿ.ಪಿ.ಆರ್ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳನ್ನು ವಿವರಿಸಿದೆವು. ಫಲವತ್ತಾದ ಭೂಮಿಯನ್ನು ಕಳೆದುಕೊಂಡಿರುವ ರೈತರಿಗೆ ಮಣ್ಣು ಸವಕಳಿ ನಷ್ಟ ಪರಿಹಾರವನ್ನು ನೀಡಲು ಮನವಿ ಮಾಡಿದೆವು. ಕಳೆದ 10 ವರ್ಷಗಳಲ್ಲಿ ನಾಲ್ಕು ಬಾರಿ ಅಗ್ರಹಾರ ಕೆರೆ ಕಟ್ಟೆ ಒಡೆದಿರುವ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಕೂಡ ಕೋರಿದ್ದೇವೆ. ಅಧಿಕಾರಿಗಳೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಶೀಘ್ರ ಕ್ರಮಕ್ಕಾಗಿ ಜಿಲ್ಲಾಧಿಕಾರಿ ಅವರಿಗೆ ರಾಜ್ಯವಿಪತ್ತು ನಿಯಮಾನುಸಾರ ಕ್ರಮಕೈಗೊಳ್ಳಲು ಆದೇಶ ಕಳುಹಿಸುವುದಾಗಿ ಭರವಸೆ ನೀಡಿದರು. ಹಾಗೂ ಶೀಘ್ರ ರಾಷ್ಟ್ರ ವಿಪತ್ತು ಪ್ರಾಧಿಕಾರ ವೀಕ್ಷಣೆಗೆ ಬರಲಿದೆ ಎಂದು ತಿಳಿಸಿದರು” ಎಂದು ರೈತರ ನಿಯೋಗದಲ್ಲಿ ತೆರಳಿದ್ದ ರಾಜ್ಯ ಯುವಶಕ್ತಿ ಉಪಾಧ್ಯಕ್ಷ ನಲ್ಲೊಜನಹಳ್ಳಿ ವಿಜಯ ಬಾವರೆಡ್ಡಿ ಹೇಳಿದರು.

ರೈತರ ನಿಯೋಗದಲ್ಲಿ ತಿಮ್ಮನಾಯಕನಹಳ್ಳಿ ಬಚ್ಚರೆಡ್ಡಿ, ಆನೆಮಡಗು ರಣಜಿತ್, ದೊಡ್ಡಬಂದರಘಟ್ಟ ಭೈರೆಡ್ಡಿ, ಕೋನಪ್ಪ, ಆನಂದ್ ರೆಡ್ದಿ, ಚೌಡಪ್ಪ, ನರಸಿಂಹರೆಡ್ಡಿ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version