Sidlaghatta : ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಹೋರಾಟದ ಅಂಗವಾಗಿ ಬುಧವಾರ ಆಯೋಜಿಸಿದ ಪೂರ್ವಭಾವಿ ಸಭೆಯಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಅವರು ಮಾತನಾಡಿದರು.
ರಾಜ್ಯ ಬಿಜೆಪಿ ಸರ್ಕಾರ ರೈತರನ್ನು ಕೃಷಿಯಿಂದ ಹೊರಹಾಕುವ ನೀತಿ ಜಾರಿಗೆ ತಂದಿರುವುದು ಸೇರಿದಂತೆ ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಕೆ ಹಾಗೂ ವಿದ್ಯುತ್ತನ್ನು ಖಾಸಗೀಕರಣ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಇದೇ ಸೆಪ್ಟೆಂಬರ್ 12 ರಂದು ವಿಧಾನಸಭೆ ಮುತ್ತಿಗೆ ಹಾಕುವ ಹೋರಾಟವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ರೈತರನ್ನು ಕೃಷಿಯಿಂದ ಹೊರಗೆ ಹಾಕುವ ನೀತಿಯನ್ನು ಜಾರಿಗೆ ತಂದು ಈಗ ಕೃಷಿ ಮಾರುಕಟ್ಟೆಯನ್ನು ರೈತರಿಂದ ಕಸಿದು ಕಂಪನಿಗಳಿಗೆ ನೀಡಲು ಮತ್ತು ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಂಡು, ಹಣವಂತರು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ಕಂದಾಯ ಕಾಯ್ದೆ 1961 ಮತ್ತು 1964 ಕಾನೂನಿಗೆ ತಿದ್ದುಪಡಿ ತಂದು, ದೇಶದಲ್ಲಿ ಎಲ್ಲೂ ಇಲ್ಲದ ಕಾನೂನು ರಾಜ್ಯದಲ್ಲಿ ಜಾರಿಗೆ ತಂದು ರೈತರನ್ನು ನಾಶ ಮಾಡಲು ಹೊರಟಿದೆ. ಜೊತೆಗೆ ಹೈನುಗಾರಿಕೆಯಿಂದ ರೈತರನ್ನು ತಪ್ಪಿಸಿ ಬಂಡವಾಳ ಶಾಹಿಗಳ ಮೂಲಕ ವಿದೇಶಿ ಹಾಲು ಮಾರುಕಟ್ಟೆ ತೆರೆಯಲು ಹವಣಿಸುತ್ತಿದ್ದಾರೆ ಎಂದರು.
ದೇಶವನ್ನು ಕಂಪನೀಕರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರ ವಿದ್ಯತ್ತನ್ನು ಕಾರ್ಪೊರೇಟ್ ಕಂಪನಿಗೆ ನೀಡಲು ತೀರ್ಮಾನಿಸಿದೆ. ಇದರ ಕೆಳಗೆ ಉತ್ಪಾದನೆ, ಸಾಗಣೆ, ವಿತರಣೆ, ಮೂರನ್ನೂ ಸಂಪೂರ್ಣವಾಗಿ ನೀಡಲು ಹೊರಟಿದೆ. ಇದರಿಂದ ಸಾಮಾನ್ಯ ಬಳಕೆದಾರರಿಗೆ ವಿದ್ಯುತ್ ದುಬಾರಿಯಾಗುತ್ತದೆ. ರೈತರು ಕಾರ್ಪೊರೇಟ್ ಕಂಪನಿಗೆ ಬಲಿಯಾಗುತ್ತಾರೆ. ಮೀಟರ್ ಬರುತ್ತದೆ, ಅದರ ಹಿಂದೆ ನಮ್ಮ ಮೊಬೈಲ್ ಬಳಕೆಗೆ ಹೇಗೆ ಕರೆನ್ಸಿ ಹಾಕಿಸುತ್ತೇವೆಯೋ ಅದೇ ರೀತಿ ರೈತರು ಸಹ ಹಣ ತುಂಬಬೇಕಾಗುತ್ತದೆ ಎಂದರು.
ರೈತರನ್ನು ನಾಶ ಮಾಡಲು ಹೊರಟಿರುವ ಸರ್ಕಾರದಿಂದ ರೈತರ ಉಳಿವಿಗೆ ಅಗತ್ಯ ತೀರ್ಮಾನ ಕೈಗೊಳ್ಳಬೇಕಾಗಿದೆ. ರಾಜ್ಯದಲ್ಲಿ ಕೈಗಾರಿಗಾ ಉದ್ದೇಶಕ್ಕೆ ಕೃಷಿ ಫಲವತ್ತಾದ ಭೂಮಿಯನ್ನು ಮುಟ್ಟುಗೋಲು ಹಾಕುವುದನ್ನು ಸಂಪೂರ್ಣವಾಗಿ ಕೈಬಿಡಬೇಕು. ಕೃಷಿ ಮಾಡುತ್ತಿರುವ ಭೂಮಿಯನ್ನು ಈ ಕೂಡಲೇ ರೈತರಿಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಸೆಪ್ಟೆಂಬರ್ 12 ರಂದು ವಿಧಾನಸಭೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯ ರೈತರು ಸೇರಿದಂತೆ ನಾಗರಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ರಾಮಚಂದ್ರಪ್ಪ, ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ರೈತ ಮುಖಂಡರಾದ ಬೀರಪ್ಪ, ಸುಂಡ್ರಹಳ್ಳಿ ರಮೇಶ್, ಬಸವರಾಜ್, ಕೆಂಪಣ್ಣ, ಕೃಷ್ಣಪ್ಪ, ಅಶ್ವತ್ಥನಾರಾಯಣ. ಅಂಬರೀಶ್, ರಾಮಕೃಷ್ಣಪ್ಪ, ದೇವರಾಜ್ ಹಾಜರಿದ್ದರು.