Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಕನ್ನಡದ ಹಿರಿಯ ಸಾಹಿತಿ, ಜಾನಪದ ಸಾಹಿತ್ಯ ಸಂಗ್ರಾಹಕ ಫ.ಗು. ಹಳಕಟ್ಟಿ ಅವರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಫ.ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಗ್ರೇಡ್–2 ತಹಶೀಲ್ದಾರ್ ಮಂಜುನಾಥ್, ಕನ್ನಡ ಜಾನಪದ ಸಾಹಿತ್ಯದ ಸಂರಕ್ಷಣೆ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಫ.ಗು. ಹಳಕಟ್ಟಿ ಅವರು ನೀಡಿದ ಕೊಡುಗೆ ಅನನ್ಯವಾಗಿದೆ. ಗ್ರಾಮೀಣ ಬದುಕು, ಸಂಸ್ಕೃತಿ ಹಾಗೂ ಜನಪದ ಪರಂಪರೆಯನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಟ್ಟ ಅವರ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.
ಜಾನಪದ ಸಾಹಿತ್ಯವನ್ನು ಕೇವಲ ಸಂಗ್ರಹಿಸುವುದಷ್ಟೇ ಅಲ್ಲದೆ, ಅದನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಕನ್ನಡ ನಾಡು–ನುಡಿ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಉಪ ತಹಶೀಲ್ದಾರ್ ರಮೇಶ್, ಶಿರಸ್ತೆದಾರ್ ಆಸಿಯಾ ಬಿ., ವೇಣು ಹಾಗೂ ತಾಲ್ಲೂಕು ಕಚೇರಿಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.








