ಶಿಡ್ಲಘಟ್ಟ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಲಕ್ಷ್ಮಿ ರವರ ವರ್ಗಾವಣೆಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ನಿಷ್ಟಾವಂತ ಅಧಿಕಾರಿಯಾಗಿ, ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಉಳಿಸುವಲ್ಲಿ ದುಡಿದ ಅಧಿಕಾರಿಯನ್ನು ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿರುವ ಕ್ರಮ ಸರಿಯಲ್ಲ. ತಾಲ್ಲೂಕಿನ ವಿವಿದೆಡೆ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಂತಹ ವ್ಯಕ್ತಿಗಳ ವಿರುದ್ದ ಹೋರಾಟ ನಡೆಸಿ ಭೂಮಿಯನ್ನು ಅರಣ್ಯ ಇಲಾಖೆಗೆ ಉಳಿಸುವಲ್ಲಿ ನಡೆಸಿದ ಯತ್ನಕ್ಕೆ ಮುಖ್ಯಮಂತ್ರಿಗಳ ಪದಕ ಪಡೆದಿದ್ದೇ ಸಾಕ್ಷಿಯಾಗಿದೆ. ಇಂತಹ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದನ್ನು ಕೂಡಲೇ ಹಿಂಪಡೆದು ತಾಲ್ಲೂಕಿನಲ್ಲಿಯೇ ಅವರ ಸೇವೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ವಲಯ ಅರಣ್ಯಾಧಿಕಾರಿ ಕಚೇರಿಯ ಮೂಲಕ ಉಪ ಅರಣ್ಯ ಸಂರಕ್ಷಾಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಉಪಾಧ್ಯಕ್ಷ ಟಿ.ಕೆ.ಅರುಣ್‌ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಪದಾಧಿಕಾರಿಗಳಾದ ವೆಂಕಟರಾಯಪ್ಪ, ಮುದ್ದುಕೃಷ್ಣ, ಎಂ.ನಾರಾಯಣಸ್ವಾಮಿ ಹಾಜರಿದ್ದರು.







