ಉಚಿತ ಕ್ರೀಡಾ ಸಲಕರಣೆ ವಿತರಣೆ: ಓದಿನ ಜೊತೆ ಕ್ರೀಡೆಗೂ ಪ್ರೋತ್ಸಾಹ

Sidlaghatta : ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕ್ರೀಡಾಪಟು ಹಾಗೂ ಬಿಜೆಪಿ ಮುಖಂಡ ಜಯಂತಿಗ್ರಾಮ ನಾರಾಯಣಸ್ವಾಮಿ ಅವರು ಉಚಿತವಾಗಿ ಕ್ರೀಡಾ ಸಲಕರಣೆಗಳನ್ನು ವಿತರಿಸಿದರು.
ನ.03ರಂದು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಒಂದು ವಾಲಿಬಾಲ್, ಎರಡು ವಾಲಿಬಾಲ್ ನೆಟ್‌ಗಳು, ಒಂದು ಶಾಟ್‌ಪುಟ್, ಒಂದು ಡಿಸ್ಕಸ್, ಎರಡು ಜಾವೆಲಿನ್‌ಗಳು, ಒಂದು ತೂಕದ ಸ್ಕೇಲ್ ಹಾಗೂ ಒಂದು ಕ್ರಿಕೆಟ್ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯಂತಿಗ್ರಾಮ ನಾರಾಯಣಸ್ವಾಮಿ, ಸರ್ಕಾರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಅವಕಾಶ ಹಾಗೂ ಪ್ರೋತ್ಸಾಹ ದೊರೆಯಬೇಕು ಎಂಬ ಉದ್ದೇಶದಿಂದ ಕ್ರೀಡಾ ಸಲಕರಣೆಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಯನ್ನೂ ಅಭ್ಯಾಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರೊಂದಿಗೆ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಜಿಲ್ಲಾ ನೋಡಲ್ ಅಧಿಕಾರಿ ಮುನಿರಾಜು ಮಾತನಾಡಿ, ಕಾಲೇಜಿಗೆ ಉಚಿತವಾಗಿ ಕ್ರೀಡಾ ಸಲಕರಣೆಗಳನ್ನು ಒದಗಿಸಿರುವುದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಇವುಗಳನ್ನು ಸದುಪಯೋಗಪಡಿಸಿಕೊಂಡು ನಿರಂತರ ಅಭ್ಯಾಸದ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಕಾಲೇಜು, ತಾಲೂಕು ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜಶಾಸ್ತ್ರ ಉಪನ್ಯಾಸಕ ಡಿ. ಲಕ್ಷ್ಮಯ್ಯ, ಹಿಂದಿ ಅತಿಥಿ ಉಪನ್ಯಾಸಕ ಇಬ್ರಾಹಿಂ, ಜೀವಶಾಸ್ತ್ರ ಅತಿಥಿ ಉಪನ್ಯಾಸಕಿ ಸುಷ್ಮಾ, ಕನ್ನಡ ಅತಿಥಿ ಉಪನ್ಯಾಸಕ ಶ್ರೀಧರ್, ಉರ್ದು ಅತಿಥಿ ಉಪನ್ಯಾಸಕಿ ನಹೀದಾ ಬೇಗಂ ಹಾಗೂ ಗಂಗಾಧರ್ ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ಕ್ರೀಡಾ ಪರಿಕರಗಳ ವಿತರಣೆ

For Daily Updates WhatsApp ‘HI’ to 7406303366
Summary in English
National athlete and BJP leader Jayanthigrama Narayanaswamy distributed free sports equipment to a government pre-university college on 3 November: a volleyball, two volleyball nets, a shot put, a discus, two javelins, a weighing scale and a cricket kit. He said government school and college students should get more chances and encouragement in sports. NCC and NSS district nodal officer Muniraju urged students to practise regularly and bring pride to the college and the taluk.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news


