Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ಕೃಷಿಕ ಎಚ್.ಜಿ.ಗೋಪಾಲಗೌಡ ಅವರ ಹಿಪ್ಪುನೇರಳೆ ಸೊಪ್ಪಿನ ತೋಟಕ್ಕೆ ಶುಕ್ರವಾರ ಕೃಷಿ ವಿಶ್ವವಿದ್ಯಾಲಯದ 52 ಮಂದಿ ವಿದ್ಯಾರ್ಥಿಗಳು ಕೃಷಿ ವಿಜ್ಞಾನಿ ಡಾ.ವಿನೋದ ಅವರೊಂದಿಗೆ ಭೇಟಿ ನೀಡಿದ್ದರು.
ಸಮಗ್ರ ಕೃಷಿ ಪದ್ಧತಿ, ಹಿಪ್ಪುನೇರಳೆ ತೋಟದ ನಿರ್ವಹಣೆ, ಮಣ್ಣುಪರೀಕ್ಷೆ, ರೇಷ್ಮೆ ಸೊಪ್ಪಿಗೆ ಸುಳಿ, ಗಂಟು, ಬೇರುಕೊಳೆ, ಸುರಳಿ, ಎಲೆ ಮುದುರು, ನುಸಿರೋಗಗಳ ಬಗ್ಗೆ ಕೃಷಿ ವಿಜ್ಞಾನಿ ಡಾ.ವಿನೋದ ಅವರು ರೈತರು ಹಾಗೂ ವಿದ್ಯಾರ್ಥಿಗಳಿಗೆ ವಿವರಿಸಿ, ರೋಗಗಳ ಹತೋಟಿ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು.
ರೈತ ಎಚ್.ಜಿ.ಗೋಪಾಲಗೌಡ ಅವರು ಮಾತನಾಡಿ, ರೇಷ್ಮೆ ಮತ್ತು ಹೈನುಗಾರಿಕೆಯು ಗ್ರಾಮೀಣ ರೈತರಿಗೆ ವರ್ಷದ ಉದ್ದಕ್ಕೂ ಸತತ ಆದಾಯ ಮತ್ತು ಉದ್ಯೋಗ ಒದಗಿಸಿ, ಆರ್ಥಿಕ ಸಬಲೀಕರಣಕ್ಕೆ ಪ್ರಮುಖ ಕೊಡುಗೆ ನೀಡುತ್ತವೆ. ರೇಷ್ಮೆ ಕೃಷಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭದಾಯಕವಾಗಿದ್ದು, ಹೈನುಗಾರಿಕೆಯು ನಿತ್ಯ ಆದಾಯ ಮತ್ತು ಮಹಿಳಾ ಸಬಲೀಕರಣ ಒದಗಿಸುತ್ತದೆ. ವಿದ್ಯಾರ್ಥಿಗಳಲ್ಲಿ ಜಮೀನು ಇದ್ದವರು ಇದ್ದರೆ ಕೃಷಿ ಮಾಡಿ, ಕ್ಬೇರೆಡೆ ಕೆಲಸಕ್ಕೆ ಹೋಗಬೇಡಿ ಎಂದು ಕಿವಿಮಾತು ಹೇಳಿದರು.
ಕೃಷಿ ವಿದ್ಯಾರ್ಥಿಗಳು ರೇಷ್ಮೆ ಹುಳು ಸಾಕಾಣಿಕೆ ಮನೆ, ಚಂದ್ರಂಕಿ ಶೆಡ್ಡು, ಸಮಗ್ರ ಕೃಷಿ, ಎಮ್ಮೆ, ಹಸು, ಕುರಿ, ಕೋಳಿ ಜೇನು, ಮೀನು ಸಾಕಾಣಿಕೆಯನ್ನು ನೋಡಿ ಮಾಹಿತಿ ಪಡೆದರು.








