Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6 ರಿಂದ 8ನೇ ತರಗತಿಗಳ 45 ಮಕ್ಕಳು ಮತ್ತು 4 ಮಂದಿ ಶಿಕ್ಷಕರು ನಿಸರ್ಗ ಇಕೋ ಕ್ಲಬ್ ಕಾರ್ಯಕ್ರಮದ ಭಾಗವಾಗಿ ಕ್ಷೇತ್ರ ಬೆಂಗಳೂರಿನ ಜಿಕೆವಿಕೆ ಕೃಷಿ ಮಹಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಎಂಟಮಾಲಜಿ ವಿಭಾಗದ ಬಗ್ಗೆ ರವಿಕಿರಣ್, ರೇಷ್ಮೆ ಕೃಷಿಯ ಬಗ್ಗೆ ಸೃಜನ್, ತೋಟಗಾರಿಕೆ ವಿಭಾಗದ ಬಗ್ಗೆ ಲೋಕೇಶ್, ಆಹಾರ ವಿಜ್ಞಾನ ವಿಭಾಗದ ಬಗ್ಗೆ ಶಂಷಾದ್ ಬೇಗಂ ಅವರುಗಳು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡಿದರು.
ಈ ಕ್ಷೇತ್ರ ಭೇಟಿ ಕಾರ್ಯಕ್ರಮಕ್ಕೆ ಡಾ. ಎಸ್ ಚಂದ್ರಶೇಖರ್ ರವರು ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ನೀಡಿ ಮಕ್ಕಳು ಮತ್ತು ಶಿಕ್ಷಕರನ್ನು ಪ್ರೀತಿಯಿಂದ ಉಪಚರಿಸಿ, ಮುಂದೆ ಚೆನ್ನಾಗಿ ಓದಿ ನಮ್ಮ ಈ ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸ್ ಗಳಿಗೆ ಸೇರುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಕ್ಷೇತ್ರ ಬೇಟಿಯಲ್ಲಿ ಹತ್ತಾರು ಮಾಹಿತಿಗಳನ್ನು ಮನಸ್ಸಿಗೆ ತುಂಬಿಕೊಂಡು, ಹೊಟ್ಟೆ ತುಂಬಾ ತಿಂದು, ತಮ್ಮ ಶಾಲಾ ಬಸ್ ಹತ್ತಿ ಊರಿನ ಕಡೆ ಹಿಂದಿರುಗುವ ಹಾದಿಯಲ್ಲಿ ಮಕ್ಕಳು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ನೋಡಬೇಕೆಂಬ ಮಹದಾಸೆಯನ್ನು ಶಿಕ್ಷಕರ ಮುಂದಿಟ್ಟರು. ಶಿಕ್ಷಕರು ಮಕ್ಕಳ ಆಸೆಯನ್ನು ಈಡೇರಿಸಲು ವಿಮಾನ ನಿಲ್ದಾಣಕ್ಕೆ ಕರೆದೊಯ್ದರು. ವಿಮಾನ ನಿಲ್ದಾಣದ ಮುಂದೆ ಬಸ್ಸಿನಿಂದ ಇಳಿದು ಅಲ್ಲಿನ ವಿಶಾಲವಾದ ರಸ್ತೆಗಳು, ವಾಹನಗಳ ಓಡಾಟ, ಅಲ್ಲಿಗೆ ಆಗಮಿಸಿದ ಭಾರತ ಮತ್ತು ವಿದೇಶಿ ಪ್ರಯಾಣಿಕರು, ದೊಡ್ಡ ಕಟ್ಟಡಗಳು, ಸುಂದರ ಉದ್ಯಾನವನಗಳನ್ನು ನೋಡಿ ಕಣ್ತುಂಬಿಸಿಕೊಂಡರು. ವಿಮಾನಗಳ ಹಾರಾಟವನ್ನು ಹತ್ತಿರದಿಂದ ನೋಡಿ ಖುಷಿ ಪಟ್ಟರು.
ಮುಖ್ಯ ಶಿಕ್ಷಕ ದೇವರಾಜ. ಎಂ, ಇಕೋ ಕ್ಲಬ್ ಮಾರ್ಗದರ್ಶಿ ಶಿಕ್ಷಕಿ ನಳಿನಾಕ್ಷಿ. ಎಸ್. ಎ, . ಮಂಜುನಾಥ. ವಿ. ಎಂ, ಕೃಪಾ. ಎಚ್. ಬಿ, ಶಾಲಾ ವಾಹನ ಚಾಲಕರಾದ ಮುನಿಕೃಷ್ಣಪ್ಪ ಜೊತೆಗಿದ್ದರು.








