Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ (Government Hospital) ಮಂಗಳವಾರ ಧಿಡೀರ್ ಭೇಟಿ ನೀಡಿ ಆಸ್ಪತ್ರೆ ಹಾಗೂ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸಿಗುತ್ತಿರುವ ವೈದ್ಯಕೀಯ ಸವಲತ್ತುಗಳ ಬಗ್ಗೆ ಪರಿಶೀಲನೆ ನಡೆಸಿ ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ MTB ನಾಗರಾಜ್ (MTB Nagaraj) ಮಾತನಾಡಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡವರೇ ಬರುವುದರಿಂದ ಇಲ್ಲಿನ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸೇವಾಮನೋಭಾವದಿಂದ ಬಡ ಜನತೆಗೆ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.
ವೈದ್ಯೋ ನಾರಾಯಣೋ ಹರಿ ಎಂಬ ಮಾತಿನಂತೆ ವೈದ್ಯರನ್ನು ದೇವರೆಂದೇ ನಂಬಿರುವ ಜನತೆಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸಲು ಆರೋಗ್ಯ ಸಿಬ್ಬಂದಿ ಮುಂದಾಗಬೇಕು ಎಂದರು.
ಮೊದಲಿಗೆ ಮೂಳೆ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಸಚಿವರು ಆಸ್ಪತ್ರೆಯ ವ್ಯವಸ್ಥೆಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು. ನಂತರ ಪುರುಷರ ಮಹಿಳೆಯರ ಮತ್ತು ಬಾಣಂತಿಯರು ವಿಭಾಗಕ್ಕೆ ಭೇಟಿ ನೀಡಿ ರೋಗಿಗಳು ಮತ್ತು ಸಂಬಂಧಿಕರಿಂದ ಕುಂದುಕೊರತೆಗಳನ್ನು ಆಲಿಸಿದರು.
ಮಳೆಯಿಂದ ಆಸ್ಪತ್ರೆಯಲ್ಲಿ ಸೋರುತ್ತಿರುವ ಗೋಡೆಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಆಸ್ಪತ್ರೆಯಲ್ಲಿ ಮೊದಲಿಗೆ ಸ್ವಚ್ಛತೆ ಕಾಪಾಡಲು ಪ್ರಥಮ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರೊಂದಿಗೆ ಮೊಬೈಲ್ ಸಂಪರ್ಕದಲ್ಲಿ ಮಾತನಾಡಿ ಶಿಡ್ಲಘಟ್ಟ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಬೇಕೆಂದು ಸೂಚನೆ ನೀಡಿ, ಆಸ್ಪತ್ರೆಗೆ ಅಗತ್ಯವಾಗಿರುವ ಸೌಲಭ್ಯವನ್ನು ಕಲ್ಪಿಸಲು ಈಗಾಗಲೇ ಬಿಡುಗಡೆಯಾಗಿರುವ ಅನುದಾನದಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದುಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವಂತೆ ಸೂಚಿಸಿದರು.
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಮಾಹಿತಿಯನ್ನು ಪಡೆದು ಅಲ್ಲಿ ಕನಿಷ್ಠ ನಾಲ್ಕು ಜನ ಟೆಕ್ನಿಷಿಯನ್‌ಗಳು ಕಾರ್ಯನಿರ್ವಹಿಸಬೇಕು. ಪ್ರಸ್ತುತ ಎರಡು ಯಂತ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಇನ್ನೊಂದು ಯಂತ್ರವನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮಂಜಾನಾಯಕ್ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರ ಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಜಿಲ್ಲಾ ಉಪಾಧ್ಯಕ್ಷ ದೇವರಾಜ್, ತಾಲ್ಲೂಕು ಆರೋಗ್ಯಾಧಿಧಿಕಾರಿ ಡಾ.ವೆಂಕಟೇಶಮೂರ್ತಿ, ನಗರಸಭೆಯ ಅಧ್ಯಕ್ಷೆ ಸುಮಿತ್ರರಮೇಶ್, ಪೌರಾಯುಕ್ತ ಆರ್.ಶ್ರೀಕಾಂತ್, ಸಿಡಿಪಿಓ ನೌತಾಜ್ ಹಾಜರಿದ್ದರು.