ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ: ಅರ್ಧದಷ್ಟು ಹುದ್ದೆಗಳು ಖಾಲಿ

Sidlaghatta : ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ನಗರ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ತೀವ್ರಗೊಂಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮಂಜೂರಾದ 88 ಹುದ್ದೆಗಳ ಪೈಕಿ 44 ಹುದ್ದೆಗಳು ಖಾಲಿ ಇವೆ, ನಗರ ಆರೋಗ್ಯ ಕೇಂದ್ರದಲ್ಲಿ ಈಗ ಒಬ್ಬ ವೈದ್ಯೆ ಮತ್ತು ಒಬ್ಬ ನರ್ಸ್ ಮಾತ್ರ ಕರ್ತವ್ಯದಲ್ಲಿದ್ದಾರೆ.
ಬಡವರು ಮತ್ತು ಗ್ರಾಮೀಣ ಜನರಿಗೆ ಪ್ರಮುಖ ಆಸರೆಯಾಗಿರುವ ಈ ಎರಡೂ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆಯಿಂದ ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸುವುದು ಸವಾಲಾಗಿದೆ. ಈ ಹಿಂದೆಯೂ ವೈದ್ಯರ ಕೊರತೆ ಕುರಿತು ಮನವಿಗಳು ಸಲ್ಲಿಕೆಯಾಗಿದ್ದವು.
ಯಾವ ಹುದ್ದೆಗಳು ಖಾಲಿ ಇವೆ?
ಸರ್ಕಾರಿ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಮತ್ತು ಮಕ್ಕಳ ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. ಮಕ್ಕಳ ತಜ್ಞ ವೈದ್ಯರು ರಾಜೀನಾಮೆ ನೀಡಿದ್ದರಿಂದ ಆ ಹುದ್ದೆ ತೆರವಾಗಿದೆ. ಅರಿವಳಿಕೆ ತಜ್ಞ ವೈದ್ಯರೊಬ್ಬರು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಪೂರ್ಣಾವಧಿ ನಿಯೋಜನೆ ಮೇಲೆ ತೆರಳಿದ್ದು, ಸ್ಥಳೀಯ ಆಸ್ಪತ್ರೆಯ ಸೇವೆಗಳ ಮೇಲೆ ಒತ್ತಡ ಹೆಚ್ಚಾಗಿದೆ.
ಒಟ್ಟು 88 ಮಂಜೂರಾದ ಹುದ್ದೆಗಳಲ್ಲಿ 44 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ವೈದ್ಯಾಧಿಕಾರಿಗಳು ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.
“ತಕ್ಷಣ ವೈದ್ಯರು, ಸಿಬ್ಬಂದಿ ನೇಮಿಸಿ”
“ರೇಷ್ಮೆ ನಗರಿ ಶಿಡ್ಲಘಟ್ಟದ ನಗರ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆಯಿಂದ ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಪಡೆಯಲು ತೊಂದರೆಯಾಗುತ್ತಿದೆ. ನಗರದಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಎಲ್ಲರಿಗೂ ಸಾಧ್ಯವಿಲ್ಲ. ಹೀಗಾಗಿ ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯನ್ನು ತಕ್ಷಣ ನೇಮಕ ಮಾಡಬೇಕು.”
— ಲೋಕೇಶ್, ಕನ್ನಡಪರ ಹೋರಾಟಗಾರ
ನಗರ ಆರೋಗ್ಯ ಕೇಂದ್ರದಲ್ಲಿ ಏನು ಸ್ಥಿತಿ?
ನಗರ ಆರೋಗ್ಯ ಕೇಂದ್ರದಲ್ಲಿ ಹಿಂದೆ ಇಬ್ಬರು ವೈದ್ಯರು ಮತ್ತು ಇಬ್ಬರು ನರ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದರು. ಈಗ ಒಬ್ಬ ವೈದ್ಯೆ ಮತ್ತು ಒಬ್ಬ ನರ್ಸ್ ಮಾತ್ರ ಕರ್ತವ್ಯದಲ್ಲಿದ್ದಾರೆ. ನಗರ ವ್ಯಾಪ್ತಿಯಲ್ಲಿ ಸುಮಾರು 51,214 ಜನಸಂಖ್ಯೆ ಇದ್ದು, ಅದರಲ್ಲಿ 17 ಸಾವಿರಕ್ಕೂ ಹೆಚ್ಚು ಮಂದಿ ವಿವಿಧ ಸ್ಲಂ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ರಾಜೀವ್ ಗಾಂಧಿ ಬಡಾವಣೆ ಸೇರಿದಂತೆ ಹಲವು ಬಡ ಕುಟುಂಬಗಳಿಗೆ ಈ ಎರಡು ಕೇಂದ್ರಗಳೇ ಪ್ರಮುಖ ಆಸರೆ. ನಗರದ ಬಹುತೇಕ ಜನರು ರೇಷ್ಮೆ ಉದ್ಯಮ ಮತ್ತು ಕೂಲಿ ಕೆಲಸವನ್ನು ಅವಲಂಬಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಅವರಿಗೆ ಆರ್ಥಿಕ ಹೊರೆಯಾಗುತ್ತಿದೆ. ತಿಂಗಳಿಗೆ ಸುಮಾರು 60ರಿಂದ 70 ಗರ್ಭಿಣಿಯರು ನಗರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ.
“ವೈದ್ಯರನ್ನು ಕಾಣುವುದೇ ಕಷ್ಟವಾಯಿತು”
“ನನ್ನ ಮಗಳಿಗೆ ರಕ್ತದೊತ್ತಡ ಕಡಿಮೆಯಾಗಿ ಪ್ರಜ್ಞೆ ತಪ್ಪಿದಾಗ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಕಾಯುತ್ತಿದ್ದರಿಂದ ವೈದ್ಯರನ್ನು ಕಾಣುವುದೇ ಕಷ್ಟವಾಯಿತು. ಚಿಕಿತ್ಸೆಗಾಗಿ ಹೆಚ್ಚು ಒತ್ತಾಯಿಸಿದಾಗ ಜಿಲ್ಲಾಸ್ಪತ್ರೆಗೆ ಹೋಗುವಂತೆ ಹೇಳುತ್ತಾರೆ. ಸ್ಥಳೀಯ ಆಸ್ಪತ್ರೆಯಲ್ಲೇ ಅಗತ್ಯ ಚಿಕಿತ್ಸೆ ದೊರೆಯುವಂತಾಗಬೇಕು. ವೈದ್ಯರು ಮತ್ತು ಸಿಬ್ಬಂದಿಯ ಕೊರತೆಯನ್ನು ನೀಗಿಸಿ, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಬೇಕು.”
— ಮುನಿರಾಜು, ಸಾರ್ವಜನಿಕರು
ರೋಗಿಗಳು ಏನು ಅನುಭವಿಸುತ್ತಿದ್ದಾರೆ?
ತುರ್ತು ಚಿಕಿತ್ಸೆ ಮತ್ತು ಹೆರಿಗೆ ಸೇವೆಗಳ ಲಭ್ಯತೆ ಬಗ್ಗೆ ಆತಂಕ ವ್ಯಕ್ತವಾಗಿದೆ. ಗಂಭೀರ ಸ್ಥಿತಿಯ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಬೇಕಾದಾಗ ಕುಟುಂಬಗಳಿಗೆ ಪ್ರಯಾಣ ವೆಚ್ಚದ ಜೊತೆಗೆ ಸಮಯದ ಒತ್ತಡವೂ ಎದುರಾಗುತ್ತದೆ. ರೋಗಿಗಳು ಹೆಚ್ಚಿರುವಾಗ ವೈದ್ಯರನ್ನು ಕಾಣುವುದೇ ಕಷ್ಟವಾಗುತ್ತಿದೆ ಮತ್ತು ಚಿಕಿತ್ಸೆಗೆ ಒತ್ತಾಯಿಸಿದಾಗ ಜಿಲ್ಲಾ ಆಸ್ಪತ್ರೆಗೆ ಹೋಗಲು ಸೂಚಿಸಲಾಗುತ್ತದೆ ಎಂದು ಕೆಲವು ಕುಟುಂಬಗಳು ತಿಳಿಸಿವೆ.
ಕೆಲಸದ ಹೊರೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಮೇಲೂ ಒತ್ತಡ ಹೆಚ್ಚಿದೆ. ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಮತ್ತು ಅಗತ್ಯ ತಜ್ಞ ವೈದ್ಯರನ್ನು ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ವಿಷಯವನ್ನು ಆರೋಗ್ಯ ಇಲಾಖೆ ಮತ್ತು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕಿದೆ.
“ಚುಚ್ಚುಮದ್ದು ಪಡೆಯಲು ಕಾಯಬೇಕಾಯಿತು”
“ಇತ್ತೀಚೆಗೆ ನಾಯಿಯೊಂದು ಕಚ್ಚಿದ್ದರಿಂದ ಚುಚ್ಚುಮದ್ದು ಹಾಕಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದರಿಂದ ತಕ್ಷಣ ಚಿಕಿತ್ಸೆ ದೊರೆಯದೆ ಕಾಯಬೇಕಾಯಿತು. ಸಾಕಷ್ಟು ಸಮಯದ ಬಳಿಕ ಚಿಕಿತ್ಸೆ ನೀಡಿ, ಚುಚ್ಚುಮದ್ದು ಹಾಕಿದರು. ತುರ್ತು ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ಸಿಗದಿದ್ದರೆ ರೋಗಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಿಸಿ, ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಬೇಕು.”
— ಸಾಯೀಶ, ಅರ್ಚಕ

For Daily Updates WhatsApp ‘HI’ to 7406303366
Summary in English
Sidlaghatta’s government public hospital has 44 of its 88 sanctioned posts vacant, including radiologist and paediatrician posts. The urban health centre, which once had two doctors and two nurses, now has one doctor and one nurse on duty, serving a taluk-town population of about 51,214, of whom over 17,000 live in slum areas. Residents say long waits, and referrals to the district hospital, add cost and stress for poor and rural families, and they demand that vacant posts be filled urgently.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news


