ಸಾರ್ವಜನಿಕ ರಜೆಗಳಂದು ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪತ್ರಾಂಕಿತ ವೇತನ ಮತ್ತು ರಿಸ್ಕ್ ಅಲೋಯೆನ್ಸ್ ನೀಡುತ್ತಿಲ್ಲ. ನಮಗೆ ಪತ್ರಾಂಕಿತ ವೇತನವನ್ನು ಅಥವಾ ರಜೆಯನ್ನಾದರು ಮಂಜೂರು ಮಾಡಿಸಬೇಕೆಂದು ಆರೋಗ್ಯ ಇಲಾಖೆಯ ಸಿಬ್ಬಂದಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ಬಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಲಿಪಿಕ ನೌಕರರು, ಪಾರ್‌ಮಾಸಿಸ್ಟ್ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಸುರಕ್ಷಣಾಧಿಕಾರಿಗಳು, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು ಕೋವಿಡ್ ಪ್ರಕರಣಗಳು ಕಂಡು ಬಂದ ಸುಮಾರು ಎರಡು ವರ್ಷಗಳಿಂದ ಸತತವಾಗಿ ಹಗಲು ಇರುಳು ಎನ್ನದೇ ರಜೆ ದಿನಗಳಂದು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಯಾವುದೇ ಸಾರ್ವಜನಿಕ ರಜೆಗಳಲ್ಲಿ, ಪತ್ರಾಂಕಿತ ವೇತನವಾಗಲಿ, ರಿಸ್ಕ್ ಅಲೊಯನ್ಸ್ ನೀಡುತ್ತಿರುವುದಿಲ್ಲ. ನಾವೆಲ್ಲಾ ಸಾರ್ವಜನಿಕ ರಜೆಗಳಂದು ಕರ್ತವ್ಯ ನಿರ್ವಹಿಸುತ್ತಿದ್ದು ಯಾವುದೇ ರಿಸ್ಕ್ ಅಲೊಯನ್ಸ್ ನೀಡುತ್ತಿರುವುದಿಲ್ಲ. ಸರ್ಕಾರದ ಆದೇಶದಂತೆ ಒಂದು ವಾರದಲ್ಲಿ ಒಂದು ದಿನ ರಜೆ ನೀಡಬೇಕೆಂದು ಇದ್ದರೂ ಸಹ ರಜೆಯನ್ನು ನೀಡಿರುವುದಿಲ್ಲ. ಪತ್ರಾಂಕಿತ ವೇತನವನ್ನು ಸಹ ನೀಡಿರುವುದಿಲ್ಲ. ಆದರೆ ನಮ್ಮ ಜೊತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ, ಇತರೆ ಸಿಬ್ಬಂದಿಗಳಾದ ಶುಶ್ರೂಷಕಿಯರಿಗೆ ಮತ್ತು ಗ್ರೂಪ್ “ಡಿ” ನೌಕರರಿಗೆ ಪತ್ರಾಂಕಿತ ವೇತನ ಜೊತೆಯಲ್ಲಿ ರಿಸ್ಕ್ ಅಲೊಯನ್ಸ್ ನೀಡಿರುತ್ತಾರೆ. ಅವರ ಜೊತೆಯಲ್ಲಿ ಸರಿ ಸಮಾನವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಮಗೆ ಯಾವುದೇ ರೀತಿಯ ಗೌರವ ಧನವಾಗಲಿ ಪತ್ರಾಂಕಿತ ವೇತನವಾಗಲಿ ಅಥವಾ ರಜೆಯನ್ನಾಗಲಿ ನೀಡಿರುವುದಿಲ್ಲ. ಆದ ಕಾರಣ ದಯವಿಟ್ಟು ನಮಗೆ ಪತ್ರಾಂಕಿತ ವೇತನವನ್ನು ಅಥವಾ ರಜೆಯನ್ನಾದರು ಮಂಜೂರು ಮಾಡಿಸಬೇಕೆಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ಬಾರೆಡ್ಡಿ ಮಾತನಾಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಯ ಮನವಿಯನ್ನು ಜಿಲ್ಲಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಶಿರಸ್ತೆದಾರ್ ಮಂಜುನಾಥ್, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಟಿ.ಟಿ.ನರಸಿಂಹಪ್ಪ, ಅಕ್ಕಲರೆಡ್ಡಿ ಹಾಜರಿದ್ದರು.