Sidlaghatta : ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆ ಮತ್ತು ಪ್ರಗತಿ ವಿರುದ್ದ ನಡೆದ ಷಡ್ಯಂತ್ರದ ವಿರುದ್ಧ ನಾವು ನೀವು ಧ್ವನಿ ಎತ್ತದಿದ್ದರೆ ಮುಂದೊಂದು ದಿನ ನಾವು ಪಶ್ಚಾತ್ತಾಪ ಪಡಬೇಕಾಗುತ್ತದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳೆ ಪರಕೀಯರಂತೆ ಬದುಕುವ ದಿನಗಳು ದೂರವೇನಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಆತಂಕ ವ್ಯಕ್ತಪಡಿಸಿದರು.
ಧರ್ಮಸ್ಥಳ ಮಂಜುನಾಥಸ್ವಾಮಿ ದೇಗುಲದ ಪಾವಿತ್ರ್ಯತೆಯನ್ನು ಹಾಳು ಮಾಡುವ ಷಡ್ಯಂತ್ರದ ತನಿಖೆಯನ್ನು ಎನ್.ಐ.ಎಗೆ ವಹಿಸಬೇಕು. ಷಡ್ಯಂತ್ರ ನಡೆಸಿರುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಾನಾ ಹಿಂದೂ ಪರ ಸಂಘಟನೆಗಳು ಸೋಮವಾರ ನಗರದಲ್ಲಿ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮವನ್ನು, ಹಿಂದೂ ಧರ್ಮದ ದೇವಾಲಯಗಳ ಪಾವಿತ್ರ್ಯತೆಗೆ ಧಕ್ಕೆ ತರುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ದ ಹಿಂದೂಗಳಾದ ನಾವು ಜಾತಿ, ಮತ, ಪಕ್ಷವನ್ನು ಬಿಟ್ಟು ಗಟ್ಟಿಯಾದ ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ನಾವು ಇಲ್ಲಿ ಯಾವುದರ ವಿರುದ್ದವೂ ಧ್ವನಿ ಎತ್ತಲಾಗದ ಪರಿಸ್ಥಿತಿಗೆ ಬಂದು ಬಿಡುತ್ತೇವೆಂದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಪಕ್ಷಾತೀತ, ಧರ್ಮಾತೀತವಾಗಿ ಆಡಳಿತ ನಡೆಸುತ್ತಿಲ್ಲ. ಒಂದು ಕೋಮಿನವರನ್ನು ಓಲೈಸುವ ಕೆಲಸ ಮಾಡುತ್ತಿದೆ. ಇದರಿಂದಾಗಿಯೆ ರಾಜ್ಯದಲ್ಲಿ ಜಾತಿ ಜಾತಿ ಮತ್ತು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ, ಬೆಂಕಿ ಇಡುವ ಕೆಲಸ ಕೆಲವರಿಂದ ಆಗುತ್ತಿದೆ ಎಂದು ದೂರಿದರು.
ಬುರುಡೆ ತಂದ ಅನಾಮಿಕನಿಗೆ ಆಗಲೇ ಮಂಪರು ಪರೀಕ್ಷೆ ಮಾಡಿಸಿ ಸತ್ಯಾಂಶವನ್ನು ಬಯಲಿಗೆ ಎಳೆಯುವುದನ್ನು ಬಿಟ್ಟು ಅವನು ಹೇಳಿದ ಕಡೆಯೆಲ್ಲಾ ದೊಡ್ಡ ದೊಡ್ಡ ಗುಂಡಿ ತೋಡಿ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತಂದ ಅದೇ ಸರ್ಕಾರವು ಅನಾಮಿಕ ಹೇಳಿದ ಅಂತ ಒಂದು ಮಸೀದಿ ಕ್ಷೇತ್ರದಲ್ಲಿ ಗುಂಡಿ ತೆಗೆಯುವ ಧೈರ್ಯ ತೋರುತ್ತಾ ಎಂದು ಪ್ರಶ್ನಿಸಿದರು.
ಇದಿಷ್ಟೆ ಅಲ್ಲ ಯೂಟ್ಯೂಬರ್ ಸಮೀರ್ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇಲ್ಲ ಸಲ್ಲದ ವಿಷಯಗಳನ್ನು ಹಾಕಿ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವಂತ ವಿಡಿಯೋವನ್ನು ಹಾಕಿದಾಗ ಅದನ್ನು ವಿರೋಧಿಸಿ ಪ್ರಶ್ನಿಸುವುದನ್ನು ಬಿಟ್ಟು ಟಿವಿ, ಮೊಬೈಲ್, ಯೂಟ್ಯೂಬ್ ನಲ್ಲಿ ನೋಡಿಕೊಂಡು ಸುಮ್ಮನೇ ಕೂತ ಹಿಂದೂಗಳೆ ಮುಂದೊಂದು ದಿನ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷದ ಬೀಜ ಬಿತ್ತುವ ಯಾರೇ ಆಗಿರಲಿ, ಅದು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಆಗಿರಲಿ ಅದು ಉಗ್ರಗಾಗಿ ದುಷ್ಕೃತ್ಯಕ್ಕೆ ಸಮಾನ. ಅಂತಹವರನ್ನು ನಡು ಬೀದಿಯಲ್ಲಿ ಗುಂಡಿಕ್ಕಿ ಕೊಲ್ಲಬೇಕು. ಎಲ್ಲರಿಗೂ ದೇಶ ಮುಖ್ಯವಾಗಬೇಕು ಎಂದರು.
ಧರ್ಮಸ್ಥಳ ವಿರುದ್ದ ನಡೆದ ಷಡ್ಯಂತ್ರದ ಹಿಂದೆ ದೇಶ ವಿದೇಶಗಳಲ್ಲಿ ನೆಲೆಸಿದ ದೇಶ ವಿರೋಧಿ, ಧರ್ಮ ವಿರೋಧಿಗಳ ಕೈವಾಡವಿದ್ದು ಎನ್.ಐ.ಎಗೆ ತನಿಖೆಯನ್ನು ವಹಿಸಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮವನ್ನು ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಶಾಸಕ ಎಂ.ರಾಜಣ್ಣ, ಡಾ.ಸತ್ಯನಾರಾಯಣರಾವ್, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಯುವ ಸೇನೆ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಹಿತ್ತಲಹಳ್ಳಿ ಗೋಪಾಲಗೌಡ ಮಾತನಾಡಿದರು. ತಹಶೀಲ್ದಾರ್ ಗಗನ ಸಿಂಧು ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸುವುದಾಗಿ ಭರವಸೆ ನೀಡಿದರು.
ಮುಖಂಡರಾದ ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ಕನಕಪ್ರಸಾದ್, ಬಿ.ಸಿ.ನಂದೀಶ್, ಹಿತ್ತಲಹಳ್ಳಿ ಸುರೇಶ್, ಡಿ.ಸಿ.ರಾಮಚಂದ್ರ, ಪಲಿಚೇರ್ಲು ಸೋಮಶೇಖರ್, ರೂಪಸಿ ರಮೇಶ್, ಆನೆಮಡಗು ಮುರಳಿ, ಸದ್ದಹಳ್ಳಿ ಗೋಪಿನಾಥ್ ಸೇರಿದಂತೆ ಆರ್.ಎಸ್.ಎಸ್, ಭಜರಂಗದಳ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಧರ್ಮಸ್ಥಳ ಯೋಜನಾ ಸಂಘ ಸೇರಿದಂತೆ ಹಿಂದೂ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.