ಮೂರು ತಿಂಗಳ ಗ್ರಾಮೀಣ ವಾಸ್ತವ್ಯದ ಸಮಾರೋಪ ‘ಹೊನ್ನೆಲೆ’: ರೈತರ ಏಳಿಗೆಗೆ ಶ್ರಮಿಸಲು ಕೃಷಿ ವಿದ್ಯಾರ್ಥಿಗಳಿಗೆ ಕರೆ

- Advertisement -
- Advertisement -

Sidlaghatta : ಕೃಷಿ ವಿದ್ಯಾರ್ಥಿಗಳು ರೈತರೊಂದಿಗೆ ಬೆರೆತು ಅವರ ಕಷ್ಟ-ನಷ್ಟಗಳನ್ನು ಅರಿತುಕೊಳ್ಳಬೇಕು. ಕೃಷಿ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ರೈತರ ಏಳಿಗೆಗೆ ಶ್ರಮಿಸಬೇಕು ಎಂದು KMF ನ ಮಾಜಿ ನಿರ್ದೇಶಕ ಶ್ರೀನಿವಾಸ್ ರಾಮಯ್ಯ ಹೇಳಿದರು.

ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ (GKVK) ಅಂತಿಮ ವರ್ಷದ ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ವಾಸ್ತವ್ಯ ಹೂಡಿ ನಡೆಸಿದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಸಮಾರೋಪ ಸಮಾರಂಭವಾದ “ಹೊನ್ನೆಲೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೂರು ತಿಂಗಳ ಗ್ರಾಮೀಣ ವಾಸ್ತವ್ಯವು ವಿದ್ಯಾರ್ಥಿಗಳಿಗೆ ರೈತರ ಬದುಕು, ಕೃಷಿ ಚಟುವಟಿಕೆಗಳು ಹಾಗೂ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ನೇರವಾಗಿ ಅರಿಯಲು ಅವಕಾಶ ಕಲ್ಪಿಸಿದೆ. ರೈತರು ಮತ್ತು ಗ್ರಾಮಸ್ಥರೊಂದಿಗೆ ಬೆಳೆಸಿಕೊಂಡ ಆತ್ಮೀಯ ಸಂಬಂಧ, ಪಡೆದ ಅನುಭವಗಳು ಮುಂದಿನ ವೃತ್ತಿಜೀವನಕ್ಕೆ ಸಹಕಾರಿಯಾಗಲಿವೆ. ಕೃಷಿ ಶಿಕ್ಷಣದಿಂದ ಗಳಿಸಿದ ಜ್ಞಾನವನ್ನು ರೈತರ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ವಿ. ಸುರೇಶ್ ಮಾತನಾಡಿ, ಕೃಷಿ ಶಿಕ್ಷಣವು ತರಗತಿಗಳಿಗೆ ಸೀಮಿತವಾಗದೆ ಹೊಲಗಳಲ್ಲಿ ದೊರೆಯುವ ಪ್ರಾಯೋಗಿಕ ಅನುಭವದೊಂದಿಗೆ ಬೆಸೆದುಕೊಂಡಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದರು.

ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ವಿದ್ಯಾರ್ಥಿಗಳು ಸ್ಥಳೀಯವಾಗಿ ಬೆಳೆಯುವ ಬೆಳೆಗಳ ಜತೆಗೆ ವಿವಿಧ ತಳಿಗಳನ್ನು ಬೆಳೆದು ಅನುಭವ ಪಡೆದಿದ್ದಾರೆ. ರೈತರ ಸಮಸ್ಯೆ ಹಾಗೂ ಗ್ರಾಮೀಣ ಬದುಕಿನ ಸವಾಲುಗಳನ್ನು ಅರಿತಿರುವ ವಿದ್ಯಾರ್ಥಿಗಳು, ಭವಿಷ್ಯದಲ್ಲಿ ತಮ್ಮ ಜ್ಞಾನ ಮತ್ತು ಅನುಭವವನ್ನು ಕೃಷಿ ಕ್ಷೇತ್ರದ ಪ್ರಗತಿಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಕೃಷಿಕರಿಗೆ ಸಮಾಜದಲ್ಲಿ ಗೌರವದ ಸ್ಥಾನ ದೊರೆಯಬೇಕು. ಅಭಿವೃದ್ಧಿ ಕಾಮಗಾರಿಗಳಿಗಾಗಿ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವಾಗ ಅವರ ಹಿತಾಸಕ್ತಿ ಕಾಪಾಡಬೇಕು. ಜೇನು ಸಾಕಾಣಿಕೆ ಸೇರಿದಂತೆ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕು ಎಂದು ಒತ್ತಾಯಿಸಿದರು.

ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಿ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ರೈತರ ಬದುಕು ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಕೃಷಿ ಮೇಳ, ವಸ್ತುಪ್ರದರ್ಶನ

ಮೂರು ತಿಂಗಳ ಅವಧಿಯಲ್ಲಿ ವಿದ್ಯಾರ್ಥಿಗಳು ರೈತರೊಂದಿಗೆ ಬೆರೆತು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪಡೆದ ಅನುಭವ ಹಾಗೂ ಗ್ರಾಮದಲ್ಲಿ ಬೆಳೆದ ವಿವಿಧ ಬೆಳೆಗಳನ್ನು “ಹೊನ್ನೆಲೆ” ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಕೃಷಿಯ ಮಹತ್ವ, ರೈತರ ಪರಿಶ್ರಮ, ಕೃಷಿ ಉತ್ಪನ್ನಗಳ ವೈವಿಧ್ಯತೆ ಮತ್ತು ಗ್ರಾಮೀಣ ಬದುಕಿನ ಸೊಬಗನ್ನು ಪರಿಚಯಿಸುವ ಉದ್ದೇಶದಿಂದ ಕೃಷಿ ಮೇಳ, ವಸ್ತುಪ್ರದರ್ಶನ ಹಾಗೂ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ತಾವು ಬೆಳೆದ ಬೆಳೆಗಳು, ಕೃಷಿ ಚಟುವಟಿಕೆಗಳಲ್ಲಿ ಪಡೆದ ಅನುಭವ ಹಾಗೂ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರದರ್ಶಿಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ಕೃಷಿಯೊಂದಿಗೆ ಹೈನುಗಾರಿಕೆಯನ್ನು ಸಮನ್ವಯಗೊಳಿಸುವ ಮೂಲಕ ರೈತ ಕುಟುಂಬಗಳಿಗೆ ನಿರಂತರ ಆದಾಯದ ಅವಕಾಶ ಕಲ್ಪಿಸುವುದು, ವೈಜ್ಞಾನಿಕ ಪಶುಸಂಗೋಪನೆ, ಹಾಲಿನ ಗುಣಮಟ್ಟ ಸುಧಾರಣೆ ಹಾಗೂ ಸುಧಾರಿತ ತಂತ್ರಜ್ಞಾನಗಳ ಬಳಕೆಯ ಬಗ್ಗೆಯೂ ಚರ್ಚಿಸಲಾಯಿತು.

ಸಂಪ್ರದಾಯದ ಮೆರವಣಿಗೆ

“ಹೊನ್ನೆಲೆ” ಅಂಗವಾಗಿ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ತಲೆಯ ಮೇಲೆ ಕಳಸ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು. ಎತ್ತುಗಳನ್ನು ಒಳಗೊಂಡ ಗ್ರಾಮೀಣ ಸಂಪ್ರದಾಯದ ಪ್ರದರ್ಶನ ಗಮನ ಸೆಳೆಯಿತು. ಹಳ್ಳಿಯ ಸೊಗಡು, ಕೃಷಿ ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆಯನ್ನು ಬಿಂಬಿಸಿದ ಮೆರವಣಿಗೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಆಹ್ವಾನ ಪತ್ರಿಕೆಯಲ್ಲಿದ್ದ ಅಧಿಕಾರಿಗಳು ಗೈರು

ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರಿಸಲಾಗಿದ್ದ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು. ರೈತರು ಮತ್ತು ಕೃಷಿ ವಿದ್ಯಾರ್ಥಿಗಳ ನಡುವೆ ಜ್ಞಾನ ವಿನಿಮಯಕ್ಕೆ ವೇದಿಕೆಯಾಗಿದ್ದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸಿದ್ದರೆ, ಇಲಾಖೆಗಳ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ನೀಡಲು ಅವಕಾಶವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ನಿವೃತ್ತ ಮುಖ್ಯ ಎಂಜಿನಿಯರ್ ಎಂ. ಗಣೇಶ, ಬೆಂಗಳೂರಿನ ಡೈರಿ ವಿಜ್ಞಾನ ಕಾಲೇಜಿನ ನಿವೃತ್ತ ಡೀನ್ ಡಾ. ಬಿ.ವಿ. ವೆಂಕಟೇಶಯ್ಯ, ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಎನ್. ಆನಂದ, ತೋಟಗಾರಿಕೆ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಎಂ. ಶಾಲಿನಿ, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಕೆ.ಜೆ. ಸೌಮ್ಯ, ಕೃಷಿ ಸೂಕ್ಷ್ಮಜೀವವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಿ. ಬಿಂದುಶ್ರೀ, ಕೃಷಿ ವಿಸ್ತರಣಾ ವಿಭಾಗದ ಸಹ ಪ್ರಾಧ್ಯಾಪಕಿ ಹಾಗೂ ಸಹ ಸಂಯೋಜಕಿ ಡಾ. ಹೆಚ್.ಕೆ. ಪಂಕಜ, ವಿಶ್ವವಿದ್ಯಾನಿಲಯದ ಪ್ರತಿನಿಧಿಗಳು, GKVK ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

In English: The ‘Honnele’ event marked the conclusion of a three-month rural agricultural work experience programme by final-year students of GKVK (University of Agricultural Sciences, Bengaluru) who stayed at K. Muttukadahalli in Sidlaghatta taluk. Former KMF director Srinivas Ramaiah inaugurated it and urged students to mingle with farmers and find practical solutions to their problems; UAS Bengaluru Vice-Chancellor Dr. S.V. Suresh said agricultural education is most effective when joined with field experience. Karnataka Rajya Raitha Sangha state working president Bhaktarahalli Byregowda urged that farmers’ interests be protected during land acquisition. The event included an agriculture fair, an exhibition of crops grown by the students, a traditional procession and seminars; it was also noted that officials named on the invitation from several departments were absent.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -