Sidlaghatta : ಶ್ರಾವಣ ಮಾಸದ ಕಡೆಯ ಶನಿವಾರ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಮಾರ್ಗದ ಹೊಸಹುಡ್ಯ ಬಳಿಯ ಶ್ರೀಕ್ಷೇತ್ರ ಶಾಂತಿಧಾಮದಲ್ಲಿ ಶನೇಶ್ವರಸ್ವಾಮಿಗೆ 1148 ಕ್ಕೂ ಹೆಚ್ಚು ಲೀಟರ್ ಹಾಲಿನ ಅಭಿಷೇಕ ನಡೆಯಿತು. ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಭಕ್ತರು ನೀಡಿದ 1148 ಲೀಟರ್ ಹಾಲಿನಿಂದಲೆ ಸ್ವಾಮಿಗೆ ಅಭಿಷೇಕ ನೆರವೇರಿಸಿ ಅಭಿಷೇಕದ ಹಾಲಿನಲ್ಲೇ ಭಕ್ತರು ನೀಡಿದ ಅಕ್ಕಿ ಬಳಸಿ ತಯಾರು ಮಾಡಿದ ಪ್ರಸಾದವನ್ನು ಪೂಜೆಯಲ್ಲಿ ಭಾಗವಹಿಸಿದ್ದ ಎಲ್ಲ ಭಕ್ತರಿಗೂ ವಿತರಿಸಲಾಯಿತು.
ಸ್ವಾಮಿಯ ಮೂರ್ತಿಗೆ ಕ್ಷೀರಾಭಿಷೇಕದ ನಂತರ ವಿಶೇಷವಾಗಿ ಬೆಳ್ಳಿ ವಜ್ರಾಂಗಿ ಅಲಂಕಾರ ಮಾಡಲಾಗಿತ್ತು. ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಎಲ್ಲೆಡೆ ಪೂಜೆ
ಶ್ರಾವಣ ಮಾಸದ ಕಡೆಯ ಶನಿವಾರದ ಅಂಗವಾಗಿ ತಾಲ್ಲೂಕಿನ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ, ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ತಲಕಾಯಲಬೆಟ್ಟದ ಶ್ರೀಭೂನೀಳಾ ಸಮೇತ ಶ್ರೀವೆಂಕಟೇಶ್ವರಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿಯ ಗುಟ್ಟದ ಮೇಲಿನ ಶ್ರೀಬ್ಯಾಟರಾಯಸ್ವಾಮಿ ದೇವಾಲಯ, ಬೆಳ್ಳೂಟಿ ಗೇಟ್ ನ ಭೂನೀಳಾ ಪದ್ಮಾವತಿ ಸಮೇತ ಶ್ರೀವೆಂಕಟೇಶ್ವರಸ್ವಾಮಿ ದೇವಾಲಯ ಸೇರಿದಂತೆ ದೇವಾಲಯಗಳಲ್ಲಿ ಶ್ರಾವಣ ಮಾಸದ ಶನಿವಾರದ ಪೂಜೆಗಳು ಶ್ರದ್ಧಾಭಕ್ತಿಯಿಂದ ನಡೆದವು.