Mittanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಿತ್ತನಹಳ್ಳಿ ಗ್ರಾಮದಲ್ಲಿ ಕ್ರಿ.ಶ. 1338ರ ಹೊಯ್ಸಳ ಸಾಮ್ರಾಜ್ಯದ ಕಾಲಘಟ್ಟದ ಅಪರೂಪದ ಶಾಸನ ಪತ್ತೆಯಾಗಿದ್ದು, ಸ್ಥಳೀಯ ಇತಿಹಾಸಾಸಕ್ತರಲ್ಲಿ ಸಂಚಲನ ಮೂಡಿಸಿದೆ. ಶಾಸನ ತಜ್ಞ ಕೆ. ಧನಪಾಲ್ ಅವರ ನೇತೃತ್ವದ ತಂಡವು ಅಪ್ಪೇಗೌಡನಹಳ್ಳಿಯ ತ್ಯಾಗರಾಜ್, ಡಿ.ಎನ್. ಸುದರ್ಶನರೆಡ್ಡಿ ಮತ್ತು ಚಂದ್ರಶೇಖರ್ ಅವರ ಜೊತೆಗೂಡಿ ಭಾನುವಾರ ಈ ಅಮೂಲ್ಯ ಶಾಸನವನ್ನು ಪತ್ತೆಹಚ್ಚಿದ್ದಾರೆ.
ಐದು ಅಡಿ ಎತ್ತರ ಮತ್ತು ಎರಡುವರೆ ಅಡಿ ಅಗಲದ ಚಪ್ಪಡಿ ಕಲ್ಲಿನ ಮೇಲೆ ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಶಾಸನ ಕೆತ್ತಲ್ಪಟ್ಟಿದ್ದು, ಮತ್ತೊಂದು ಬದಿಯಲ್ಲಿ ಸೂರ್ಯ, ಚಂದ್ರ ಮತ್ತು ನಂದಿಯ ಆಕೃತಿಗಳು ಕಾಣಿಸುತ್ತವೆ. ನಂದಿಯ ಚಿತ್ರಣದಿಂದ ಈ ಶಾಸನವು ದಾನಶಾಸನವಾಗಿರುವುದು ಸ್ಪಷ್ಟವಾಗಿದೆ.
ಶಾಸನದಲ್ಲಿ “ಮಹಾಸಾಮಂತಾಧಿಪತಿ ಮಂಜಯ್ಯನಾಯಕ” ಎಂಬ ಉಲ್ಲೇಖವಿದ್ದು, ಇದು ಇತಿಹಾಸಾತ್ಮಕವಾಗಿ ಬಹುಮುಖ್ಯ ದಾಖಲೆ ಎಂದು ತಜ್ಞರು ಹೇಳಿದ್ದಾರೆ. ಆ ಕಾಲದಲ್ಲಿ ಈ ಪ್ರದೇಶವು ನಿಗಿರಿಲಿ ಚೋಳ ಮಂಡಲದ ಅಂಬಡಕ್ಕಿನಾಡು ವ್ಯಾಪ್ತಿಗೆ ಸೇರಿದ್ದು, ಮಂಜಯ್ಯನಾಯಕನು ಹೊಯ್ಸಳ ರಾಮನಾಥನ ಪುತ್ರನಾಗಿದ್ದಾನೆ. ವೀರಬಲ್ಲಾಳನ ಆಳ್ವಿಕೆಯ ಕಾಲದಲ್ಲಿಯೂ ಅವನು ಅಂಬಡಕ್ಕಿನಾಡಿನ ರಾಜ್ಯಪಾಲನಾಗಿ ಮುಂದುವರಿದಿದ್ದಾನೆ.
ಶಾಸನದ ಪ್ರಕಾರ, ಮಂಜಯ್ಯನಾಯಕನ ಪುತ್ರ ಸೊಣ್ಣಯ್ಯನಾಯಕನು ಹಡಪದ ಶೈವಗುರು ಮಾಚಯ್ಯನಿಗೆ ಮೂರು ಊರುಗಳನ್ನು ದಾನವಾಗಿ ನೀಡಿರುವ ವಿವರ ದೊರೆತಿದೆ — ಮಂಚೇನಹಳ್ಳಿ ಗ್ರಾಮದಲ್ಲಿನ ಗದ್ದೆ, ವಡಿಗೇಹಳ್ಳಿ (ಇಂದಿನ ವಿಜಯಪುರ ತಾಲ್ಲೂಕು, ದೇವನಹಳ್ಳಿ ಹತ್ತಿರ), ಕೋನಘಟ್ಟದ ಬೆದ್ದಲು ಜಮೀನು ಹಾಗೂ ಸುಗಟೂರಿನ ಹಿರಿಯ ಕೆರೆಯ ಬಳಿಯ ಎರಡು ಸಲಗೆ ಗದ್ದೆಗಳನ್ನು ಒಳಗೊಂಡಂತೆ.
ದಾನವನ್ನು ಹಾಳು ಮಾಡಿದವರು “ಗಂಗಾ ನದಿ ದಡದಲ್ಲಿ ಹಸುವನ್ನು ಕೊಂದ ಪಾಪಕ್ಕೆ ಒಳಗಾಗುವರು” ಎಂಬ ಶಾಪವಾಕ್ಯ ಕೂಡ ಶಾಸನದಲ್ಲಿ ಉಲ್ಲೇಖಿತವಾಗಿದೆ.
ಈ ಶಾಸನದಲ್ಲಿ ಉಲ್ಲೇಖಿತವಾದ ಸುಗಟೂರು, ವಡಿಗೇಹಳ್ಳಿ, ಮಂಚೇನಹಳ್ಳಿ ಹಾಗೂ ಕೋನಘಟ್ಟ ಸ್ಥಳಗಳನ್ನು ಪ್ರಾಚೀನ ಐತಿಹಾಸಿಕ ಹಳ್ಳಿಗಳೆಂದು ಗುರುತಿಸಲಾಗಿದೆ. ಶಾಸನ ಅಧ್ಯಯನಕ್ಕೆ ಕೆ.ಆರ್. ನರಸಿಂಹನ್ ಹಾಗೂ ಸ್ಥಳೀಯರಾದ ಎಸ್.ಎನ್. ಶಂಕರಪ್ಪ ಮತ್ತು ಎನ್. ದೀಪಕ್ ಸಹಕಾರ ನೀಡಿದ್ದಾರೆ.
“ಈ ಅಪರೂಪದ ಶಾಸನವು ಇತಿಹಾಸದಲ್ಲಿ ದಾಖಲೆಯಿಲ್ಲದ ಹೊಸ ಮಾಹಿತಿಯನ್ನು ನೀಡುತ್ತಿದ್ದು, ಹೊಯ್ಸಳರ ಆಡಳಿತದ ಸ್ಥಳೀಯ ವಿಸ್ತಾರ ಮತ್ತು ಧಾರ್ಮಿಕ ದಾನಪದ್ದತಿಯ ಬಗ್ಗೆ ಹೊಸ ಬೆಳಕು ಚೆಲ್ಲುತ್ತದೆ. ಶಿಲೆಯನ್ನು ಸಂರಕ್ಷಿಸಬೇಕೆಂದು ನಾವು ಜಿಲ್ಲಾ ಆಡಳಿತಕ್ಕೆ ಮನವಿ ಮಾಡಿದ್ದೇವೆ,” ಎಂದು ಶಾಸನತಜ್ಞ ಧನಪಾಲ್ ಹೇಳಿದರು.